ಚಿಕ್ಕಮಗಳೂರಿನ ಮೂಡಿಗೆರೆಯ ಗೃಹಿಣಿ ಶ್ವೇತಾ ಅವರ ಅಸಹಜ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಪತಿ ದರ್ಶನ್ ಅವರ ಅನೈತಿಕ ಸಂಬಂಧವೇ ಶ್ವೇತಾ ಸಾವಿಗೆ ಕಾರಣ ಎಂಬುದು ತಿಳಿದುಬಂದಿದೆ.
ಮೃತ ಶ್ವೇತಾ ಅವರ ಮರಣೋತ್ತರ ಪರೀಕ್ಷೆಯಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ವಿಷದ ಇಂಜೆಕ್ಷನ್ ಕೊಡಲಾಗಿಲ್ಲ. ಬದಲಾಗಿ ರಾಗಿ ಮುದ್ದೆಯಲ್ಲಿ ಸೈನೆಡ್ ಬೆರಸಿ ಕೊಲ್ಲಲಾಗಿದೆ ಎಂಬ ಅಂಶ ಬಹಿರಂಗವಾಗಿದೆ.
ಈ ಮಧ್ಯೆ ತನ್ನ ಪತ್ನಿ ಶ್ವೇತಾರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವ ದರ್ಶನ್, ತನಿಖೆಯಲ್ಲಿ ಸತ್ಯಾಂಶ ಹೊರಗೆಡವಿದ್ದಾನೆ.
ಇದಕ್ಕೂ ಮುನ್ನ ಶ್ವೇತಾ ಅವರ ಕುಟುಂಬಕ್ಕೆ ಹೃದಯಾಘಾತದಿಂದ ಸಾವಾಗಿರುವುದಾಗಿ ದರ್ಶನ್ ನಂಬಿಸಿ, ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಶ್ವೇತಾ ಕುಟುಂಬದವರು ಅನುಮಾನ ಬಂದು ಮರಣೋತ್ತರ ಪರೀಕ್ಷೆ ನಡೆಸಿದಾಗ ಸತ್ಯ ಹೊರಬಂದಿದೆ. ಅಂತಿಮವಾಗಿ ದರ್ಶನ್ ಯೋಜನೆ ಉಲ್ಟಾ ಒಡೆದಿದೆ.

ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕಲ್ ಲ್ಯಾಬ್ ನಡೆಸುತ್ತಿದ್ದಾರೆ ದರ್ಶನ್. ಶ್ವೇತಾ ಹಾಗು ದರ್ಶನ್ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಒಂದು ಮಗವೂ ಇದೆ.
ಆದರೆ ದರ್ಶನ್ ಲ್ಯಾಬ್ ನಲ್ಲಿ ಕೆಲಸ ಮಾಡುವ ಅಶ್ವಿನಿಯನ್ನು ಪ್ರೀತಿಸುತ್ತಿದ್ದರು. ಇದನ್ನು ಅರಿತ ಶ್ವೇತಾ, ದರ್ಶನ್ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು ಎನ್ನಲಾಗಿದೆ. ಶ್ವೇತಾ ದರ್ಶನ್ ಪ್ರೇಮಿ ಅಶ್ವಿನಿಯೊಂದಿಗೆ ಸಂಭಾಷಣೆ ನಡೆಸಿರುವ ಆಡಿಯೋ ಸಹ ಲಭ್ಯವಾಗಿದೆ.
ಶ್ವೇತಾ ಸಾವಿನ ಪ್ರಕರಣ ಬೆಳಕಿಗೆ ಬಂದ ಬಳಿಕ ಬೆಂಗಳೂರಿನ ಮಲ್ಲೇಶ್ವರ ನಿವಾಸಿಯಾಗಿರುವ ಅಶ್ವಿನಿ ಬಂಧನ ಭೀತಿಯಿಂದ ಪರಾರಿಯಾಗಿದ್ದಾಳೆ.
ದರ್ಶನ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಶ್ವೇತಾಗೆ ದರ್ಶನ್ ಆಹಾರದಲ್ಲಿ ಕೆಮಿಕಲ್ ತಿನ್ನಿಸಿ ಹತ್ಯೆಗೈದಿರುವುದಾಗಿ ತಿಳಿದುಬಂದಿದೆ. ಸ್ಥಳ ಮಹಜರ್ ನಲ್ಲಿ ಕೊಲೆಯಾಗಿರುವುದಕ್ಕೆ ಸಾಕ್ಷ್ಯ ಗಳು ಲಭ್ಯವಾಗಿವೆ. ಎಫ್ ಎಸ್ ಎಲ್ ವರದಿ ಬರಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತ ಶ್ವೇತಾ ಅವರ ಅಂತ್ಯಕ್ರಿಯೆ ಯನ್ನು ನಡೆಸಲಾಗಿದೆ. ಮಗು ತನ್ನ ತಾಯಿಯ ಶವಕ್ಕೆ ಪೂಜೆ ಸಲ್ಲಿಸುವಾಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.




