ಕಿಡಿಗೇಡಿಗಳಿಗೆ ಪಾಸ್ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರತಾಪ್ ಸಿಂಹ, ಮೌನಕ್ಕೆ ಜಾರಿದ್ದಾರೆ. ಘಟನೆ ನಡೆದ ದಿನ ಸ್ಪೀಕರ್ ಓಂ ಬಿರ್ಲಾ ಅವ್ರಿಗೆ ವಿವರಣೆ ನೀಡಿದ್ದು ಬಿಟ್ಟರೆ, ಬಹಿರಂಗವಾಗಿ ಕಾಣಿಸಿಕೊಳ್ತಿಲ್ಲ.. ಮಾಧ್ಯಮ ಗಳ ಕರೆಗಳನ್ನೂ ಸ್ವೀಕರಿಸುತ್ತಿಲ್ಲ.
ಸಂಸತ್ ಭವನಕ್ಕೆ ಇಬ್ಬರು ನುಗ್ಗಿ ಆತಂಕ ಸೃಷ್ಠಿಸಿದ ಬೆನ್ನಲ್ಲೇ, ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಾಪ್ ಸಿಂಹರ ಬಗ್ಗೆ ಚರ್ಚೆಯಾಗ್ತಿದೆ. ಕಾರಣ ಆ ಆಗಂತುಕರಿಗೆ, ಲೋಕಸಭೆಗೆ ಎಂಟ್ರಿಯಾಗಲು ವಿಸಿಟರ್ ಪಾಸ್ ಕೊಟ್ಟವರೇ ಬಿಜೆಪಿ ಸಂಸದ ಪ್ರತಾಪ್ ಸಿಂಹ. ಆ ಪಾಸ್ ಸಿಗದೇ ಇದ್ದಿದ್ದರೆ, ಲೋಕಸಭೆಯೊಳಗೆ ಅಂಥಾ ಒಂದು ಅನಾಹುತ ನಡೀತಾನೇ ಇರ್ಲಿಲ್ಲ ಎಂಬ ಟೀಕೆ ಟಿಪ್ಪಣಿ ನಡುವೆ ಸಂಸದ ಪ್ರತಾಪ್ ಸಿಂಹ ಮೌನಕ್ಕೆ ಜಾರಿದ್ದಾರೆ. ಘಟನೆ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ವಿವರಣೆ ನೀಡಿದ್ದು ಬಿಟ್ಟರೆ, ಎಲ್ಲೂ ಬಹಿರಂಗವಾಗಿ ಹೇಳಿಕೆಯನ್ನಾಗಲಿ, ಕಾಣಿಸಿಕೊಳ್ಳುವುದಾಗಲಿ ಮಾಡಿಲ್ಲ.
ಸ್ಪೀಕರ್ ಗೆ ನೀಡಿದ ವಿವರಣೆಯಲ್ಲೇನಿದೆ…?
ಆರೋಪಿಗಳಲ್ಲಿ ಒಬ್ಬನಾಗಿರುವ ಡಿ. ಮನೋರಂಜನ್‌ನ ತಂದೆ ದೇವರಾಜೇ ಗೌಡ ಅವರು ತಮ್ಮ ಕ್ಷೇತ್ರದಲ್ಲಿ ವಾಸವಾಗಿದ್ದು, ಹೊಸ ಸಂಸತ್ ಭವನ ವೀಕ್ಷಿಸಲು ಪಾಸ್ ಕೊಡಿಸುವಂತೆ ತಮಗೆ ಮನವಿ ಮಾಡಿದ್ದರು ಎಂದು ಸ್ಪೀಕರ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮನೋರಂಜನ್ ತಂದೆ ದೇವರಾಜ್ ಅವರು ತಮ್ಮ ಆಪ್ತ ಸಹಾಯಕರು ಮತ್ತು ತಮ್ಮ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮನೋರಂಜನ್ ಹಾಗೂ ಸಾಗರ್ ಶರ್ಮಾಗೆ ಸಂಸತ್ ಪ್ರವೇಶಕ್ಕೆ ಪಾಸ್ ದೊರಕಿಸಲು ಪ್ರಯತ್ನಿಸುತ್ತಿದ್ದರು. ಇದರ ಹೊರತಾಗಿ ಆರೋಪಿ ಕುರಿತು ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಬಿಟ್ಟರೆ ಬೇರೆಲ್ಲೂ ಕಾಣಿಸಿಕೊಂಡಿಲ್ಲ.. ಹೇಳಿಕೆಯನ್ನೂ ನೀಡಿಲ್ಲ.
ದಾಳಿಕೋರರ ಮೇಲೆ UAPA ಯಂತಹ ಗಂಭೀರ ಪ್ರಕಾರಣ ದಾಖಲಿಸಲಾಗಿದೆ. ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ. ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದೇ ವಿಚಾರವನ್ನೇ ಮುಂದಿಟ್ಕೊಂಡು ಪ್ರತಿಭಟನೆ ಮಾಡಲು ಮುಂದಾಗಿದೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಡ್ಯಾಮೇಜ್ ಆಗೋದ್ ಬೇಡ ಎಂಬ ಹಿನ್ನಲೆ, ಎಲ್ಲೂ ಕಾಣಿಸಿಕೊಳ್ಳಬೇಡಿ, ಘಟನೆ ಕುರಿತು ಹೇಳಿಕೆ ನೀಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಸಲಹೆ ನೀಡಿದ ಹಿನ್ನಲೆಯಲ್ಲಿ ಮೌನಕ್ಕೆ ಜಾರಿದ್ದಾರೆ ಪ್ರತಾಪ್ ಎಂಬ ಮಾಹಿತಿ ಲಭ್ಯವಾಗಿದೆ.
ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ಸಂಗತಿಗಳ ಬಗ್ಗೆ ಕಳವಳ ಇತ್ತು. ಸಂಸದರ ಗಮನ ಸೆಳೆಯಲು ಮತ್ತು ಈ ವಿಚಾರಗಳ ಬಗ್ಗೆ ಚರ್ಚೆ ನಡೆಸುವಂತೆ ಮಾಡಲು ಸಂಸತ್ ಗೆ ನುಗ್ಗಿದ್ದಾಗಿ ಬಂಧಿತರು ಹೇಳಿಕೊಂಡಿದ್ದು, ವಿಚಾರಣೆ ನಡೆಸಲಾಗ್ತಿದೆ.




