ಬೆಂಗಳೂರು: ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾಡಿರುವ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ – ಗೌರಿ ಬಿದನೂರು ನಡುವೆ ಹಾಗೂ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ವಯಾ ಪುಟ್ಟಪರ್ತಿ ನಡುವಿನ ರೈಲ್ವೆ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಆದರೆ ಈ ಕಾಮಗಾರಿ ಪೂರ್ಣಗೊಂಡಿದೆ ಎಂದು ವೀರಪ್ಪ ಮೊಯ್ಲಿ ಮಾಡಿರುವ ಪೋಸ್ಟ್ ಗಳು ಇದೀಗ ಮಾಜಿ ಮುಖ್ಯಮಂತ್ರಿ ಅವರಿಗೆ ತೀವ್ರ ಮುಜುಗರವುಂಟು ಮಾಡಿವೆ.
The ongoing construction of the 103 km new broad gauge railway line connecting Chikkaballapur, Bagepally, and Srisatya Sai Prashanthi Nilayam (Puttaparthi) at a cost of Rs. 692.43 crore signifies a significant investment in enhancing regional connectivity and transportation… pic.twitter.com/wB8vHfyOWn
— Dr. M. Veerappa Moily (@moilyv) December 6, 2023
ಲೋಕಸಭಾ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿವಾಗಿದ್ದು, ಪ್ರತಿದಿನ ಒಂದಲ್ಲಾ ಒಂದು ಅಭಿವೃದ್ಧಿ ವಿಚಾರವನ್ನು ಪೋಸ್ಟ್ ಮಾಡುತ್ತಿದ್ದಾರೆ.
ಗೌರಿ ಬಿದನೂರು ಮತ್ತು ಚಿಕ್ಕಬಳ್ಳಾಪುರ ನಡುವೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಇನ್ನೂ ಸಮೀಕ್ಷೆ ಹಂತದಲ್ಲಿದೆ. ಆದರೆ ಮೊಯ್ಲಿ ಅವರು ೪೪ ಕಿಲೋಮೀಟರ್ ಉದ್ದದ ಕಾಮಗಾರಿ 367 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಈ ಭಾಗದ ಸಂಪರ್ಕ ಸೇತುವೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂದು ವರ್ಣಿಸಿದ್ದಾರೆ. ಆದರೆ ಈ ಯೋಜನೆಗಳಿಗೆ ಅನುಮೋದನೆ ದೊರೆತ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಅವರು ಸಂಸದರಾಗಿರಲಿಲ್ಲ ಎನ್ನಲಾಗಿದೆ.
ಚಿಕ್ಕಬಳ್ಳಾಪುರ – ಬಾಗೇಪಲ್ಲಿ – ಸತ್ಯಸಾಯಿ ಪ್ರಶಾಂತಿ ನಿಲಯಂ [ಪುಟ್ಟಪರ್ತಿ] ನಡುವಿನ 102 ಕಿಲೋಮೀಟರ್ ಉದ್ದದ ಹೊಸ ಬ್ರ್ಯಾಡ್ ಗೇಜ್ ರೈಲ್ವೆ ಮಾರ್ಗ ಯೋಜನೆ 692 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ಸಹ ಬರೆದುಕೊಂಡಿದ್ದಾರೆ.
ಸಮೀಕ್ಷೆ ಹಂತದಲ್ಲಿರುವ ಯೋಜನೆಗಳ ಬಗ್ಗೆ ಬರೆದುಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಜೊತೆಗೆ ವೀರಪ್ಪ ಮೊಯ್ಲಿ ಅವರು ಮಾಡಿರುವ ಟ್ವಿಟ್ಟರ್ ಪೋಸ್ಟ್ ಸಾರ್ವತ್ರಿಕವಾಗಿಯೂ ಭಾರೀ ಚರ್ಚೆಗೆ ಕಾರಣವಾಗಿವೆ.




