Belagavi Winter Session: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕುಮಾರರಾದ ಅಶೋಕ್,ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಛಾಟಿ ಏಟು ಕೊಡ್ತೇವೆ. ಛಳಿ ಜ್ವರ ಬಿಡಿಸ್ತೇವೆ ಎಂದಲ್ಲಾ ಬೊಂಬಡಾ ಬಾರಿಸಿದ್ದ ಆರ್.ಅಶೋಕ್ ಅಧಿವೇಶನದಲ್ಲಿ ತಂಡಾ ಹೊಡೆದಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತೇನೆ, ರೈತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುತ್ತೇನೆಂದು ವೈಲೆಂಟ್ ಆಗಿದ್ದ ಮಾಜಿ ಸಿಎಂ, ದಳಪತಿ ಎಚ್ ಡಿ ಕುಮಾರಸ್ವಾಮಿ, ನಾಲ್ಕೈದು ದಿನ ಕಲಾಪಕ್ಕೆ ಆಗಮಿಸಿ ಸೈಲೆಂಟ್ ಆದರು..!

ಹೋರಾಟ ಮಾಡುವುದಾಗಿ ಹೊರಗೆ ಅಬ್ಬರಿಸಿ,ಒಳಗೆ ಸೈಲೆಂಟ್‌ ಆದ ಮಾಜಿ ಸಿಎಂ

ವಿಪಕ್ಷ ಗಳು ತೀರ ಕಾತುರದಿಂದ ಎದುರು ನೋಡ್ತಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿದಿದೆ..
ಅಧಿವೇಶನದಲ್ಲಿ ಸರ್ಕಾರ ವನ್ನು ಕಟ್ಟಿ ಹಾಕುವಲ್ಲಿ ಕಮಲ-ದಳ ವಿಫಲವಾಗಿದೆ.ಸಿಬಿಐ ವಾಪಸ್ ಪ್ರಕರಣ, ಜಮೀರ್ ಅಹಮದ್‌ಖಾನ್ ವಿಚಾರ, ಗ್ಯಾರಂಟಿ ಜಾರಿ ವೈಫಲ್ಯ,ಅನ್ನಭಾಗ್ಯ ಅಕ್ಕಿ ನೀಡದ‌ ವಿಚಾರ,ಗೃಹ ಲಕ್ಷ್ಮೀ ಜಾರಿ ತಾಂತ್ರಿಕ ಸಮಸ್ಯೆ, ಖಾಲಿ‌ ಹುದ್ದೆಗಳ ಭರ್ತಿ, ನೀರಾವರಿ ಯೋಜನೆಗಳು, ಸಚಿವರ- ಕಾಂಗ್ರೆಸ್ ಶಾಸಕರು ನಡುವೆ ಗೊಂದಲ,‌ ಸರ್ಕಾರದ ಗ್ಯಾರಂಟಿಯಲ್ಲಿ ಸಿಲುಕಿ ಅಭಿವೃದ್ದಿಗೆ ಹಿನ್ನಡೆ ವಿಚಾರ ಸೇರಿದಂತೆ ಪ್ರಮುಖ‌ ವಿಷಯಗಳು ಚರ್ಚೆ ನಡೆಸವಲ್ಲಿ‌ ಬಿಜೆಪಿ ಮತ್ತು ಜೆಡಿಎಸ್ ಭಾರೀ ವೈಫಲ್ಯ ಎದುರಿಸಿದೆ.

ಸದನದಲ್ಲಿ ಕಮಲ-ದಳ ಜಂಟಿ ಹೋರಾಟದ ಘೋಷಣೆ ಠುಸ್ಸಾಗಿದ್ದೇಕೆ..?

ವರ್ಗಾವಣೆ ದಂಧೆ, ಗ್ಯಾರಂಟಿ ಗೊಂದಲ, ಯತೀಂದ್ರ ಪ್ರಕರಣ, ಚೆಲುವರಾಯಸ್ವಾಮಿ ಕೆರೆ ಒತ್ತುವರಿ ಪ್ರಕರಣ,ಬರ ಪರಿಹಾರ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡುವಲ್ಲಿ ವಿಪಕ್ಷ ವಿಫಲ ವಾಗಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು ಸ್ವಪಕ್ಷದ‌ ಗೊಂದಲ‌ ಬಗೆಹರಿಸುವುದೇ ಬಿಜೆಪಿಗೆ ದೊಡ್ಡ ಸವಾಲು ಆಗಿ ಬಿಟ್ಟಿತು.
ಸರ್ಕಾರದ ಲೋಪದೋಷ ಎತ್ತಿ ಹಿಡಿಯುವ ಬದಲು ತಮ್ಮ ಪಕ್ಷ,ನಾಯಕತ್ವ,ಆಂತರಿಕ‌‌ ಗೊಂದಲ,ಹೊಂದಾಣಿಕೆ‌ ಕೊರತೆ,ಪ್ರಬುದ್ದತೆ ಪ್ರದರ್ಶನದಲ್ಲಿ ಬಿಜೆಪಿ ಎಡವಿದೆ.

ಪ್ರತಿಪಕ್ಷ ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆಯ ಕಾರಣಕ್ಕೆ ಗೊಂದಲ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪ್ರತಿಪಕ್ಷ ನಾಯಕರ ವಿಫಲವಾಗಿದ್ದು ಬಹಿರಂಗವಾಗಿ ಕಾಣ್ತಿತ್ತು. ಇನ್ನು ಸದನದಲ್ಲಿ ಕೆಲ ಶಾಸಕರು ಧರಣಿ ನಡೆಸಿದ್ರೆ, ಇನ್ನು ಕೆಲವರು ಸಭಾತ್ಯಾಗ ಮಾಡಿದ ಕಾರಣ ಮುಜುಗರ ಎದುರಿಸುವಂತಾಯ್ತು. ಆಡಳಿತ ಪಕ್ಷಕ್ಕಿಂತ ಸ್ವಪಕ್ಷೀಯರನ್ನೇ ಹೆಚ್ಚು ಕಾಡಿದ ಬಸನಗೌಡ ಪಾಟೀಲ್ ಯತ್ನಾಳ್, ರಾಜಕೀಯವಾಗಿ ತಮಗಾದ ಅನ್ಯಾಯವನ್ನು ಚರ್ಚೆಯ ವೇಳೆ ಹೊರ ಹಾಕಿದ್ದು ಬಿಜೆಪಿಗೆ ಭಾರೀ ಹಿನ್ನಡೆ ಎದುರಿಸುವಂತಾಯ್ತು.

ಉತ್ತರ ಕರ್ನಾಟಕ ಭಾಗದ ಮೇಲಿನ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾತನ್ನಾಡದಿರುವುದು.
ಶಾಸಕಾಂಗ ಸಭೆ ನಡೆಸುವ ವಿಚಾರದಲ್ಲಿ ಗೊಂದಲ ಮಾಡಿಕೊಂಡ ಪ್ರತಿಪಕ್ಷ ಬಿಜೆಪಿ, ಸೂಕ್ತ ಕಾರ್ಯತಂತ್ರ ಮಾಡದ ಕಾರಣಕ್ಕೆ ಸದನದಲ್ಲಿ ಅನಗತ್ಯವಾಗಿ ಒಂದು ದಿನ ಧರಣಿ ಮಾಡಿತು. ಜಮೀರ್ ಅಹಮದ್ ಹೇಳಿಕೆ ವಿಚಾರದಲ್ಲಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಯೂ ಬಿಜೆಪಿ ವಿಫಲವಾಗಿದೆ. ಹೀಗಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಚರ್ಚೆ ಹುಟ್ಟುಹಾಕಲು ವಿಫಲವಾಯ್ತು.

ಮಾಜಿ ಸಿಎಂ ಕುಮಾರಸ್ವಾಮಿಯ ಕುರಿತು ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿ

ಮೈತ್ರಿಯನ್ನು ಸಮರ್ಥವಾಗಿ ಪ್ರದರ್ಶನ ಮಾಡುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿಫಲವಾಗಿದೆ.ಸದನದಲ್ಲಿ ಅಬ್ಬರಿಸದೇ ಮೌನದಿಂದಲೇ ಸದನಕ್ಕೆ ಬಂದು ಹೋದ ಹೆಚ್ ಡಿ ಕುಮಾರಸ್ವಾಮಿ, ಸರಕಾರದ ಯಾವುದೇ ಭ್ರಷ್ಟಾಚಾರ ಪ್ರಕರಣದ ಬಗ್ಗೆ ತುಟಿ ಬಿಚ್ಚಲಿಲ್ಲ.
ಕೆಲ ವಿಚಾರಗಳಿಗಷ್ಟೇ ಪರಸ್ಪರ ಜೊತೆಯಾಗಿ ನಿಂತ ಮೈತ್ರಿ ಪಕ್ಷಗಳು, ಜಂಟಿಯಾಗಿ ಸರಕಾರದ ವಿರುದ್ಧ ಅಬ್ಬರಿಸುವಲ್ಲಿ ವಿಫಲವಾಗಿದೆ. ಉತ್ತರಕರ್ನಾಟಕ ಅಭಿವೃದ್ಧಿ ಚರ್ಚೆಯ ವೇಳೆ ಉತ್ತರ ಮತ್ತು ದಕ್ಷಿಣ ಭಾಗದ ತಾರತಮ್ಯದ ಸಮರ್ಪಕ ವಿವರಣೆ ನೀಡುವಲ್ಲಿಯೂ ವಿಫಲವಾಗಿದೆ. ತಮ್ಮ ತಮ್ಮ ಪಕ್ಷದ ಸರಕಾರ ಇದ್ದಾಗಲೂ ಉತ್ತರಕ್ಕೆ ಅನ್ಯಾಯವಾದುದನ್ನು, ದಾಖಲೆ ಸಹಿತ ಅಭಿವೃದ್ಧಿಯಲ್ಲಿನ ಹಿನ್ನಡೆಯನ್ನು ಸ್ವತಃ ಬಿಜೆಪಿ ಶಾಸಕರೇ ಪ್ರಸ್ತಾಪಿಸಿದ್ದು ಮುಜುಗರ ಎದುರಿಸುವಂತಾಯ್ತು.

ಉತ್ತರ ಕರ್ನಾಟಕಕ್ಕೆ ಹಲವಾರು ಘೋಷಣೆ ಮೂಲಕ ಬಿಜೆಪಿ-ಜೆಡಿಎಸ್ ಗೆ ಸಿದ್ದು ಟಕ್ಕರ್

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯಾವುದೇ ಸಂದರ್ಭ ಸೃಷ್ಟಿಸುವಲ್ಲೂ ಪ್ರತಿಪಕ್ಷ ವಿಫಲವಾಗಿದೆ.
ಪ್ರತಿಪಕ್ಷ ಬಿಜೆಪಿಯ ಧರಣಿಯ ಲಾಭವನ್ನು ಪಡೆದುಕೊಂಡು ವಿಧೇಯಕಗಳನ್ನು ಸರ್ಕಾರ ಪಾಸ್ ಮಾಡಿಕೊಂಡಿತು.ಇದರೊಂದಿಗೆ ರೈತರ ಬಡ್ಡಿ ಮನ್ನಾ, ಕೈಗಾರಿಕೆ ಕ್ಲಸ್ಟರ್ ಘೋಷಣೆ ಮಾಡುವ ಮೂಲಕ ಸದನದಲ್ಲಿ ಸಿದ್ದರಾಮಯ್ಯ ಗೆದ್ದರು.

More News