ನವದೆಹಲಿ : ಡೋನೇಟ್ ಫಾರ್ ದೇಶ್ (ದೇಶಕ್ಕಾಗಿ ದೇಣಿಗೆ) ಕಾರ್ಯಕ್ರಮಕ್ಕೆ ಖುದ್ದಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು 1.38 ಲಕ್ಷ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಖುದ್ದಾಗಿ ಹಣ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ನೀವು ಶ್ರೀಮಂತರಿಂದ ಮಾತ್ರ ದೇಣಿಗೆ ಸಂಗ್ರಹಿಸಿದರೆ, ನಾವು ಅವರ ಪರವಾಗಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ನಮ್ಮ ಪಕ್ಷ ಯಾವತ್ತೂ ಶೋಷಿತ ವರ್ಗದವರ ಪರವಾಗಿದೆ, ಅದರಲ್ಲೂ ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗಗಳ, ಮತ್ತು ಅಲ್ಪಸಂಖ್ಯಾತರ ಪರವಾಗಿ ಇದೆ. ಆದ್ದರಿಂದ ಅವರಿಗಾಗಿ ಅಭಿವಡದ್ಧಿ ಕೆಲಸಗಳನ್ನು ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದೇವೆ ಎಂದರು.
ಜನಸಾಮಾನ್ಯರ ಸಹಾಯದಿಂದ ದೇಶವನ್ನು ಕಟ್ಟಲು ಈ ಅಭಿಯಾನದಿಂದ ಸಾಧ್ಯವಾಗಲಿದೆ ಎಂದು ತಿಳಿಸಿದ ಅವರು, ಶೋಷಿತ ವರ್ಗಗಳ ಹಕ್ಕುಗಳನ್ನು ಎತ್ತಿಹಿಡಿಯುವ ಬದ್ದತೆಯಾಗಿದೆ ಎಂದರು.

ಇದೇ ಡಿಸೆಂಬರ್ 28ಕ್ಕೆ ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳಾಗಲಿವೆ. ಹೀಗಾಗಿ ರೂಪಾಯಿ 138, ರೂಪಾಯಿ 1,380, ರೂಪಾಯಿ 13,800 ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡಿ ಎಂದು ಕಾಂಗ್ರೆಸ್ ಜನತೆಯಲ್ಲಿ ಮನವಿ ಮಾಡಿದೆ. ರಾಜ್ಯಮಟ್ಟದ ನಾಯಕರು, ಚುನಾಯಿತ ಜನಪ್ರತಿನಿಧಿಗಳು, ಪಿಸಿಸಿ ಅಧ್ಯಕ್ಷರು ಹಾಗೂ ಎಐಸಿಸಿ ಪದಾಧಿಕಾರಿಗಳು ಕನಿಷ್ಠ ರೂಪಾಯಿ 1380 ರೂಪಾಯಿ ದೇಣಿಗೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಸೂಚಿಸಿದೆ. ಡಿಸೆಂಬರ್ 28ರವರೆಗೆ ಈ ಅಭಿಯಾನ ನಡೆಯಲಿದೆ.
ದೇಣಿಗೆಗೆ www.donateinc.in ಹಾಗೂ www.inc.in ಆನ್ ಲೈನ್ ಚಾನಲ್ ಕಾಂಗ್ರೆಸ್ ಬಿಡುಗಡೆ ಮಾಡಿದೆ.




