Covid Variant JN.1: ಕೇರಳದಲ್ಲಿ ಮೊದಲ ಜೆ ಎನ್ 1 ತಳಿ ಪತ್ತೆ: ಕರ್ನಾಟಕದಲ್ಲಿ ಹೈ ಅಲರ್ಟ್

ದೇಶದಲ್ಲೇ ಮೊದಲ ಜೆಎನ್ 1 ತಳಿ ಪತ್ತೆ ಆಗಿದ್ದು ಕರ್ನಾಟಕದಲ್ಲಿ ಎಚ್ಚರಿಕೆ ಹೆಜ್ಜೆ ಇಡಲಾಗಿದೆ. ಈಗಾಗಲೇ ಕೇರಳ- ಕರ್ನಾಟಕ ಗಡಿ ಬಾವಲಿ ಚೆಕ್‍ಪೋಸ್ಟ್‌ ನಲ್ಲಿ ಭಿಗಿ ವಾಹನ ತಪಾಸಣೆ ನಡೆಸಲಾಗ್ತಿದೆ. ಕರ್ನಾಟಕದ ಗಡಿಯಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಮೈಸೂರಿನ ಎಚ್.ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗ್ತಿದೆ.

ಕೇರಳದಲ್ಲಿ ಓಮಿಕ್ರಾನ್ ಉಪತಳಿ ಜೆ ಎನ್ 1 ಕೇಸ್ ಗಳು ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿದರು. ಇಂದು ತಮ್ಮ ವಿಕಾಸ ಸೌಧ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕ್ರಮದ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ರಾಜ್ಯದಲ್ಲಿ ಇಲ್ಲಿಯ ವರೆಗೆ ಜೆ.ಎನ್ 1 ಪತ್ತೆ ಆಗಿಲ್ಲ ಎಂಬುದನ್ನ ಸ್ಪಷ್ಟಪಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟ್ ಗಳನ್ನ ಮಾಡುವಂತೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸೂಚನೆ ನೀಡಿದ್ದಾರೆ.

ಇನ್ನು ಕೇರಳದಿಂದ ಬರುವ ಸರ್ಕಾರಿ ಬಸ್ಸು ಹಾಗೂ ಖಾಸಗಿ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಇಬ್ಬರು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಸಹಾಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದವರಿಗೆ ವಿರಾಜಪೇಟೆಯಲ್ಲೇ ಇರುವ ಆಸ್ಪತ್ರೆ ಗೆ ದಾಖಲಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಕೊರೋನಾ ಕೇಸ್ ಪತ್ತೆ..?

ಕೊರೊನಾದ ಮೂರನೇ ಅಲೆಯ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ ದೃಢವಾಗಿದೆ. ಇದು ರೂಪಾಂತರ ತಳಿ ಅಲ್ಲ ಎಂದು ಮಂಡ್ಯ ಡಿಎಚ್‍ಓ ಡಾ.ಮೋಹನ್ ಸ್ಪಷ್ಟಪಡಿಸಿದ್ದಾರೆ. ಇನ್ನು ಮದ್ದೂರಿನ ವ್ಯಕ್ತಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಬಂದಾಗ ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸಿದ ವೇಳೆ ಕೊರೊನಾ ದೃಢವಾಗಿದೆ. ಈ ವ್ಯಕ್ತಿಗೆ ಟ್ರಾವಲ್ ಹಿಸ್ಟರಿ ಇಲ್ಲದ ಕಾರಣ ಮನೆಯಲ್ಲಿದ್ದ ನಾಲ್ವರನ್ನು ರ್ಯಾಪಿಡ್ ಟೆಸ್ಟ್ ಗೆ ಒಳಪಡಿಸಲಾಯ್ತು‌. ಕುಟುಂಬದ ಎಲ್ಲರಿಗೂ ನೆಗೆಟಿವ್ ಬಂದಿದೆ. ಸದ್ಯ ಕೊರೊನಾ ಸೋಂಕಿತ ವ್ಯಕ್ತಿಗೆ ಯಾವುದೇ ಲಕ್ಷಣಗಳು ಗೋಚರವಾಗಿಲ್ಲ. ಇದರ ನಡುವೆ ಗಡಿ ಭಾಗದಲ್ಲಿ ಭಿಗಿ ಭದ್ರತೆ ಒದಗಿಸಲಾಗಿದೆ.

More News