ನವದೆಹಲಿ : ಸಂಸತ್ತಿನಲ್ಲಿ ಡಿಸೆಂಬರ್ 13ರಂದು ನಡೆದ ಭದ್ರತಾ ಲೋಪ ಕುರಿತ ಚರ್ಚೆಗೆ ಒತ್ತಾಯಿಸಿ ಹಾಗೂ ಗೃಹ ಸಚಿವರಿಂದ ಉತ್ತರಕ್ಕಾಗಿ ಒತ್ತಾಯಿಸಿ ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ನಾನಾ ಪಕ್ಷಗಳ ಸದಸ್ಯರನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸದನಗಳಿಂದ ಅಮಾನತುಗೊಳಿಸಲಾಗಿತ್ತು.
ಇದರ ಬೆನ್ನಲ್ಲೆ ಲೋಕಸಭೆ ಸಚಿವಾಲಯ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅಮಾನತುಗೊಂಡ ಎಲ್ಲ 141 ಸಂಸದರು ಈ ಅವಧಿಯಲ್ಲಿ ಸಂಸತ್ತಿನ ಮೊಗಸಾಲೆ, ಗ್ಯಾಲರಿ ಮತ್ತು ಅವರಿಗೆ ಮೀಸಲಿಟ್ಟ ಕೋಠಡಿಗಳನ್ನು ಪ್ರವೇಶಿಸಲು ನಿಷೇಧ ಹೇರಿದೆ.

ಅಲ್ಲದೆ, ಸಂಸದರು ಒಂದು ವೇಳೆ ಸಂಸದೀಯ ಸಮಿತಿಯಲ್ಲಿದ್ದರೆ ಅವರು ಸಭೆಗೆ ಹಾಜರಾಗಲು ಅವರಿಗೆ ಯಾವುದೇ ರೀತಿಯ ಅವಕಾಶವಿಲ್ಲ. ಅಮಾನತು ಸಮಯದಲ್ಲಿ ಅವರು ಯಾವುದೇ ಸೂಚನೆ ನೀಡುವಂತಿಲ್ಲ. ಅವರು ತಮ್ಮ ಅಮಾನತು ಅವಧಿಯಲ್ಲಿ ನಡೆಯುವ ಸಮಿತಿಗಳ ಯಾವುದೇ ಚುನಾವಣೆಗೆ ಮತ ಚಲಾವಣೆ ಮಾಡುವಂತಿಲ್ಲ. ಹಾಗೆಯೇ ಅಮಾನತು ಅವಧಿಯಲ್ಲಿ ವೇತನದ ಭತ್ಯೆಗೆ ಅವರು ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸದನದಲ್ಲಿ ಗದ್ದಲ ನಡೆದ ನಂತರ ಲೋಕಸಭೆಯಿಂದ 95 ಹಾಗೂ ರಾಜ್ಯಸಭೆಯ 46 ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ. ಈ ನಡುವೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಈ ಘಟನೆಯನ್ನು ಖಂಡಿಸಿ ಡಿಸೆಂಬರ್ 22 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.




