ಬೆಂಗಳೂರು: ಬಿಟ್ ಕಾಯಿನ್ ಹಗರಣ ವಿಚಾರವಾಗಿ ತನಿಖೆ ನಡೆಸಲು ನಾವು ಅಧಿಕಾರದಲ್ಲಿ ಇಲ್ಲ, ಅಧಿಕಾರ ಬಿಟ್ಟುಕೊಡಲಿ, ತನಿಖೆ ಮಾಡಿ ಹೆಸರು ಬಹಿರಂಗಪಡಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ನವರು ಹೆಸರು ಬಹಿರಂಗ ಪಡಿಸಲಿ ಎಂದು ಬಿಜೆಪಿ ಮುಖಂಡರ ಹೇಳಿಕೆ ವಿಚಾರವಾಗಿ ಬೆಂಗಳೂರಿನ ಅವರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಅಧಿಕಾರದಲ್ಲಿ ಇಲ್ಲ, ಅಧಿಕಾರದಲ್ಲಿರೋದು ಬಿಜೆಪಿ. ಹಾಗಾದ್ರೆ ಅಧಿಕಾರ ಬಿಟ್ಟು ಕೊಡಲಿ. ನಾವು ತನಿಖೆ ಮಾಡಿ ಎಲ್ಲರ ಹೆಸರು ಹೇಳುತ್ತೇವೆ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು ಹಾಕಿದರು.
ಹಗರಣದಲ್ಲಿ ಯಾರೇ ಭಾಗಿಯಾಗಿರಲಿ, ಬಿಜೆಪಿ ಅವರೇ ಆಗಲಿ ,ಕಾಂಗ್ರೆಸ್ ಅವರೇ ಅಗಲಿ ಮೊದಲು ಯಾರು ಭಾಗಿಯಾಗಿದ್ದಾರೆ ಎಂದು ಸರ್ಕಾರ ಹೆಸರು ಹೇಳಲಿ ಎಂದರು, ತಪ್ಪಿಸಿಕೊಳ್ಳಲು ಹೇಳಿಕೆ ನೀಡಬಾರದು ಎಂದು ಆಗ್ರಹಿಸಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರು ಮಾತನಾಡುವುದು ನೋಡಿದ್ರೆ ನನಗೆ ಅನುಮಾನ ಬರುತ್ತದೆ. ಅವರೇ ಸಿಕ್ಕಿ ಹಾಕಿಕೊಂಡಿರುವ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆದರೆ ನಾನು ಎಲ್ಲೂ ಬೊಮ್ಮಾಯಿ ಅವರ ಹೆಸರು ಹೇಳಿಲ್ಲ. ಆದರೂ ಅವರ ಹೇಳಿಕೆಗಳು ನೋಡುತ್ತಿದ್ದರೇ ಅನುಮಾನ ಬರ್ತಿದೆ ಎಂದರು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯವರದ್ದೇ ಸರ್ಕಾರ ಇದೆ. ಪೊಲೀಸ್ ಮತ್ತು ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾವು ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಹೇಳಿಕೆ ನೀಡಿ ಜಾರಿಕೊಳ್ಳಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ಸಿನವರ ಹೆಸರಿದ್ದರೆ ಅವರ ಹೆಸರನ್ನೂ ಹೇಳಲಿ. ಅವರನ್ನೂ ಬಂಧಿಸಲಿ, ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.
ಟಿಪ್ಪು ಮತಾಂಧ ಅಲ್ಲ, ಆತನ ಆಸ್ಥಾನದಲ್ಲಿ ದಿವಾನರಾಗಿದ್ದವರು ಹಿಂದುಗಳು
ಇದೇ ಸಂದರ್ಭದಲ್ಲಿ ಬಿಜೆಪಿಯವರು ಟಿಪ್ಪುವನ್ನು ಮತಾಂಧ ಅಂತ ಬಿಂಬಿಸುತ್ತಿರುವುದನ್ನು ಟೀಕಿಸಿದ ಅವರು, ಟಿಪ್ಪು ಆಸ್ಥಾನದಲ್ಲಿ ದಿವಾನರಾಗಿದ್ದವರು ಹಿಂದುಗಳು ಎಂದು ತಿಳಿಸಿದರು. ನಮ್ಮವರ ಮೋಸದಿಂದಾಗಿ ಟಿಪ್ಪು ಯುದ್ಧದಲ್ಲಿ ಸೋಲುತ್ತಾರೆ. ಟಿಪ್ಪು ಜಯಂತಿ ನನ್ನ ಕಾಲದಲ್ಲಿ ಮಾಡಿದ್ದು, ಅದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ಆರ್ ಎಸ್ ಎಸ್‌ನವರಿಗೆ ಹಳದಿ ಕಣ್ಣು, ಹಾಗಾಗಿ ಜಯಂತಿ ಮಾಡುವುದು ವಿರೋಧ ಮಾಡುತ್ತಿದ್ದಾರೆ. ಯಡಿಯೂರಪ್ಪ ಹೊಸ ಪಕ್ಷ ಮಾಡಿದಾಗ ಟಿಪ್ಪು ಬಟ್ಟೆ ಹಾಕಿದ್ರು. ಜಗದೀಶ್ ಶೆಟ್ಟರ್, ಅಶೋಕ್ ಎಲ್ಲರೂ ಟಿಪ್ಪು ಪೇಠ ಹಾಕಿದ್ರು. ಬಿಜೆಪಿಗರಿಗೆ ಒಂದೇ ನಾಲಿಗೆ ಇಲ್ಲ. ಎರಡೆರಡು ನಾಲಿಗೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದೆ ಟಿಪ್ಪು. ವಿದೇಶಿ ವ್ಯಾಪಾರ ಕುದುರಿಸಿದ್ದೆ ಟಿಪ್ಪು. ಟಿಪ್ಪು ಇಸ್ ಸೆಕ್ಯುಲರ್ ಕಿಂಗ್. ಯಾರೇ ಬಂದ್ರು ನಾನು ವಾದ ಮಾಡಲು ಸಿದ್ದ ಎಂದರು. ಒಬ್ಬೆ ಒಬ್ಬ ಸ್ವತಂತ್ರ ಹೋರಾಟದಲ್ಲಿ ಆರ್ ಎಸ್ ಎಸ್ ನವರು ಸತ್ತಿಲ್ಲ. ನಮಗೆ ಹೇಳ್ತಾರೆ ದೇಶ ಭಕ್ತಿ ಬಗ್ಗೆ ಎಂದು ಟಿಪ್ಪು ಜಯಂತಿ ವಿರೋಧಿಸಿದ್ದ ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೂ ದಾಖಲೆಗಳಿವೆ. ಜಾತಿವಾದಿ ಸಂಘಟನೆ ಆರ್‌ಎಸ್‌ಎಸ್ ಮತಾಂಧತೆ ಕಾರಣಕ್ಕೆ ಟಿಪ್ಪು ಅವರನ್ನು ವಿರೋಧಿಸುತ್ತದೆ. ಇದಕ್ಕೆ ನಾನು ಡೋಂಟ್ ಕೇರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ಆರ್‌ಎಸ್‌ಎಸ್ ಹೇಳುವ ಸುಳ್ಳುಗಳಿಗೆ ಸೊಪ್ಪಾಕುವ ಅಗತ್ಯ ಇಲ್ಲ. ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು ಎಂದು ಟಿಕೀಸಿದರು.
ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ
ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಬಿಜೆಪಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಮಂದಿ ದಲಿತರು ಮುಖ್ಯಮಂತ್ರಿಗಳಾಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿಯಲ್ಲಿ ಯಾರೂ ದಲಿತರೇ ಇಲ್ಲವೇ ? ಈಗ ಅವರದೇ ಸರ್ಕಾರ ಇದೆ. ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಆಗ್ರಹಿಸಿದರು.
ನಮ್ಮ ಸರ್ಕಾರ ಇರುವ ಪಂಜಾಬ್‌ನಲ್ಲಿ ನಾವು ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಈಗ ಇಲ್ಲಿ ಬಿಜೆಪಿಯವರ ಸರ್ಕಾರ ಇದೆ. ಹೀಗಾಗಿ ಬಿಜೆಪಿಯರವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಮಾಡಿ ತೋರಿಸಲಿ ಎಂದು ಮರು ಸವಾಲು ಹಾಕಿದರು.




