Boards and Corporations: ಜನವರಿ ಮೊದಲ ವಾರದಲ್ಲಿ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಭಾಗ್ಯ ಸಾಧ್ಯತೆ

ನವದೆಹಲಿ: ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಮತ್ತೆ ಮುಂದೂಡಿಕೆ ಆಗಿದೆ. ಶಾಸಕರ ಜೊತೆಗೆ ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ಹೈಕಮಾಂಡ್ ಸೂಚನೆ‌ ನೀಡಿದ ಹಿನ್ನಲೆ ಮುಂದೂಡಿಕೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರಣಿ ಸಭೆ ನಡೆಸಿ, ನಿಗಮ ಮಂಡಳಿ ಅಧ್ಯಕ್ಷ ರ ಪಟ್ಟಿಯೊಂದನ್ನು ನಿನ್ನೆ ಹೈಕಮಾಂಡ್ ಗೆ ನೀಡಿದ್ದರು‌. ಶಾಸಕರ ಪರ ಒಲವು ತೋರಿ ಸಿದ್ದವಾದ ಪಟ್ಟಿಯನ್ನ ಹೈಕಮಾಂಡ್ ತಡೆ ಹಿಡಿದಿದೆ.

ಸಿಎಂ ಹಾಗೂ ಡಿಸಿಎಂ ಕಳುಹಿಸಿದ ಮೊದಲ ಪಟ್ಟಿಯಲ್ಲಿ ಕೇವಲ ಶಾಸಕರ ಹೆಸರಿರುವುದನ್ನು ನೋಡಿದ ರಾಹುಲ್ ಗಾಂಧಿ, ಕೇವಲ ಶಾಸಕರಿಗೆ ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ‌ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಕೆಲ ಕಾರ್ಯಕರ್ತರಿಗೂ ಅವಕಾಶ ನೀಡಲು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ. ಹೀಗಾಗಿ ಶಾಸಕರ ಜೊತೆಗೆ ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ಸೂಚನೆ‌ ನೀಡಿದ್ದಾರೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಇನ್ನು ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ

ಹೈ ಕಮಾಂಡ್ ಅಂಗಳದಲ್ಲಿ ನಿಗಮ ಮಂಡಳಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕಾರ್ಯಕರ್ತರ ಲಿಸ್ಟ್ ತಯಾರಿಸಿದ ಬಳಿಕ ಅಧಿಕೃತ ಘೋಷಣೆ ಸಾಧ್ಯತೆ ಇದೆ.
ಈಗಾಗಲೇ ಹಿರಿಯ ಶಾಸಕರುಗಳ ಪಟ್ಟಿಯನ್ನ ರಾಜ್ಯ ನಾಯಕರು ನೀಡಿದ್ದಾರೆ. ಕಾರ್ಯಕರ್ತರ ಪಟ್ಟಿ ನೀಡಿದ ಬಳಿಕ ನಿಗಮ ಮಂಡಳಿಗಳಿಗೆ ಹೈ ಕಮಾಂಡ್ ನಿಂದ ಅಂತಿಮ ಮುದ್ರೆ ಬೀಳಲಿದೆ.

ಇನ್ನು ಏಕಕಾಲದಲ್ಲಿ 50 ರಿಂದ 60 ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆಗೆ ಹೈ ಕಮಾಂಡ್ ಒಲವು ತೋರಿಸಿದ್ದು, ಜನವರಿ ಮೊದಲ ವಾರದಲ್ಲಿ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಭಾಗ್ಯ ಸಿಗುವ ಸಾಧ್ಯತೆ ಇದೆ.

More News

You cannot copy content of this page