ನವದೆಹಲಿ : ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಿರಿಯ ಮುಖಂಡರನ್ನು ಆಹ್ವಾನಿಸಿದ್ದಕ್ಕೆ ಕಾಂಗ್ರೆಸ್ ಪಕ್ಷ ಧನ್ಯವಾದ ತಿಳಿಸಿದೆ.
ಆದರೆ, ಕಾರ್ಯಕ್ರಮದಲ್ಲಿ ಆಹ್ವಾನ ನೀಡಿದ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆಯೇ ಎಂಬುದನ್ನು ಇನ್ನು ಸ್ಪಷ್ಟಪಡಿಸಿಲ್ಲ. ಈ ವಿಚಾರ ಸಂಬಂಧ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪಕ್ಷದ ನಿಲುವು ಏನೆಂದು ಜನವರಿ 22 ರಂದು ನಿಮಗೆ ತಿಳಿಯಲಿದೆ ಎಂದು ಹೇಳಿದ್ದಾರೆ.
ಶ್ರೀರಾಮ ಮಂದಿರ ಪ್ರತಿಷ್ಠಾನದವರು ನಮಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ನೀಡಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ, ಹಾಗೆಯೇ ಆಭಾರಿಯಾಗಿದ್ದೇವೆ, ಕಾದು ನೋಡೋಣ ಎಂದು ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಲೋಕಸಭೆ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ನೀಡಿದೆ.
ಹಾಗೆಯೇ ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವರಿಗೂ ಟ್ರಸ್ಟ್ ನ ನಿಯೋಗ ತೆರಳಿ ಆಹ್ವಾನ ನೀಡಿದೆ.




