ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಬೆನ್ನಲ್ಲೇ ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡ್ಕೊಂಡು ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಸಜ್ಜಾಗಿರುವ ಜೆಡಿಎಸ್ ಗೆ ಸ್ವಪಕ್ಷೀಯರ ನಡೆಯೇ ತಲೆ ನೋವಾಗಿ ಬಿಟ್ಟಿದೆ. ನಮ್ಮಲ್ಲಿ ಸಮಸ್ಯೆ ಇಲ್ಲ. ಎಲ್ಲವೂ ಸರಿ ಇದೆ. ಸಣ್ಣ ಪುಟ್ಟ ಅಸಮಧಾನದ ಸಮಸ್ಯೆ ಬಗೆಹರಿಸಿಬಿಡ್ತೇವೆ ಎಂದು ಬಿಜೆಪಿ ಜೊತೆಗೆ ದೋಸ್ತಿಗೆ ಮುಂದಾಗಿರುವ ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಇದೀಗ ಸಿಎಂ ಇಬ್ರಾಹಿಂ ಕಾನೂನು ಸಮರ ಸಾರಿದ್ದಾರೆ.
ಬಿಜೆಪಿ ವಿರುದ್ಧ ಮೈತ್ರಿಗೆ ಅಸಮಧಾನ ಸೂಚಿಸಿದ್ದ ಸಿಎಂ ಇಬ್ರಾಹಿಂ ಸೇರಿದಂತೆ ಜೆಡಿಎಸ್ ನ ಕೆಲ ಶಾಸಕರು ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವ್ರನ್ನ ಹೊರಗಿಟ್ಟು ಸಭೆ ನಡೆಸಿದ್ದರು. ಅಷ್ಟೇ ಅಲ್ಲದೇ ತಮ್ಮ ಪಕ್ಷದ ನಡೆ ವಿರುದ್ಧ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ಇದ್ರಿಂದ ಸಿಟ್ಟಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಿಎಂ ಇಬ್ರಾಹಿಂ ಅವ್ರನ್ನ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿದರು.
ಇದರಿಂದ ಅಸಮಧಾನಗೊಂಡ ಜೆಡಿಎಸ್ ಪಕ್ಷದ ಉಚ್ಛಾಟಿತ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾನೂನು ಬಾಹಿರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ದೂರಿದ್ದಾರೆ.
ದೂರಿನ ಅರ್ಜಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಹೆಚ್.ಡಿ.ಕುಮಾರಸ್ವಾಮಿಯವರನ್ನ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪದಾಧಿಕಾರಿಗಳ ಉಚ್ಚಾಟನೆ, ಹಂಗಾಮಿ ಅಧ್ಯಕ್ಷ ನೇಮಕ ಕಾನೂನು ಬಾಹೀರವಾಗಿದ್ದು, ಅನೂರ್ಜಿತಗೊಳಿಸಿ ಅಂತ ಮನವಿ ಮಾಡಿದ್ದಾರೆ.




