ಕೇಂದ್ರದಲ್ಲಿ ಕಾಂಗ್ರೆಸ್ ನ ಖರ್ಗೆ ಸೇನೆ, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯ ಹರಿವು…ಅಧಿಕಾರಕ್ಕೆ ಬರಲು ಘಟಾನುಘಟಿ ಪಕ್ಷಗಳ ಸಂಗ್ರಾಮ. ಬಿಜೆಪಿ ತಂತ್ರದ ನಡುವೆ ಗೆಲುವಿಗೆ ನಾಂದಿ ಹಾಡಬಹುದೇ ಈ ಮಹಾಘಟಬಂಧನ ಅತಿ ದೊಡ್ಡ ನಿರ್ಧಾರ!?
ಮೋದಿ ವಿರುದ್ಧ ಸಮರ ಸಾರಲು ಕೇಂದ್ರದಲ್ಲಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಮಹಾಮೈತ್ರಿ (ಐಎನ್ ಡಿಐಎ) ಮಹಾಘಟಬಂಧನ ಸೇನಾಧಿಪತ್ಯ ದೊರಕಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮಮತಾ ಬ್ಯಾನರ್ಜಿ ನಾಯಕತ್ವದಲ್ಲಿ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್ ಮುಂದಾಳತ್ವದಲ್ಲಿ ಯುಪಿಎ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ ಹೆಸರಲ್ಲಿ ಹೊಸ ರೂಪ ಪಡೆದಿದೆ.
17 ಪಕ್ಷಗಳ ಪ್ರಮುಖ ನಾಯಕರು ತಮ್ಮ ನಡುವಿನ ಪಕ್ಷಭೇದ ಮರೆತು ನರೇಂದ್ರ ಮೋದಿ ಮಣಿಸೋಕೆ ಸಿದ್ಧರಾಗಿದ್ದಾರೆ.

ಇತ್ತ ಕರ್ನಾಟಕದಲ್ಲಿ ಕಮಲ ಮತ್ತು ದಳ ‘ಮೈತ್ರಿ ವ್ಯೂಹ ರಚಿಸಿದೆ. ಲೋಕಸಭಾ ಅಕಾಡದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ವಿರುದ್ಧ ಎದೆತಟ್ಟಿನಿಲ್ಲಬೇಕೆಂದು ನಿರ್ಧರಿಸಿರುವ ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದೆ. ಅಮಿತ್ ಶಾ ಸಮ್ಮುಖದಲ್ಲಿ ಸೀಟು ಲೆಕ್ಕಾಚಾರ ಸಹ ಅಂತಿಮಗೊಂಡಿದೆ.
ಲೋಕಸಭೆಯಲ್ಲಿ ೨೦ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲು ಬಿಜೆಪಿ ಚಿಂತಿಸಿದ್ದರೆ, ಇತ್ತ ಜಾತ್ಯಾತೀತ ಜನತಾದಳ ೪ ಸೀಟು ಪಡೆದು ಕಾಂಗ್ರೆಸ್ ಸೋಲಿಸಲು ತಂತ್ರ ಹೂಡಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಸಾರಥ್ಯದ ಕಾಂಗ್ರೆಸ್ ಮಣಿಸಲು ಬಿಜೆಪಿ- ಜೆಡಿಎಸ್ ಮೈತ್ರಿ ಗಟ್ಟಿ ಗೊಳಿಸಲು ನಾಯಕರು ಮೆಗಾ ಪ್ಲ್ಯಾನ್ ಸಿದ್ಧಗೊಳಿಸಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕೆಂದು ನಿರ್ಧರಿಸಿದೆ ಬಿಜೆಪಿ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ ತಮ್ಮ ೨೦ ಕ್ಷೇತ್ರಗಳನ್ನು ಗೆಲ್ಲುವುದು ಸುಲಭವಲ್ಲ. ಹೀಗಾಗಿ ಬಿಜೆಪಿ ಮೈತ್ರಿಮಂತ್ರ ಜಪಿಸಿದೆ.

ಎರಡು ದಿನಗಳ ಹಿಂದೆ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇಬ್ಬರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸೀಟು ಹಂಚಿಕೆ ವಿಚಾರವನ್ನು ಚರ್ಚಿಸಿದ್ದರು.
ಇದೀಗ ಬಿಜೆಪಿ, ಜೆಡಿಎಸ್ ಮಧ್ಯೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ.

ಮೂಲಗಳ ಪ್ರಕಾರ, 24 ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಯಲಿದ್ದು, 4 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ಮಾತುಕತೆ ನಡೆದಿದೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಜತೆ ಅಂತಿಮ ಮಾತುಕತೆ ಬಳಿಕ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿದೆ. ಹಾಸನ, ಮಂಡ್ಯ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಮೈಸೂರು ಅಥವಾ ತುಮಕೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಜೆಡಿಎಸ್ಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ಗೆ ನಿಗದಿಪಡಿಸಲಾಗುವ ನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಿಂದ ಹೆಚ್ಡಿ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಬಿಜೆಪಿ ಹೈಕಮಾಂಡ್ ನಾಯಕರು ಸಲಹೆ ನೀಡಿದೆ.
ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಷ್ಟ್ರ ರಾಜಕಾರಣದ ಅಗ್ನಿಪರೀಕ್ಷೆಗೆ ಕುಮಾರಸ್ವಾಮಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ, ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನೊಳಗೊಂಡ ಜೆಡಿಎಸ್ ನಿಯೋಗವು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿತ್ತು. ಆ ಬಳಿಕ ಬಿಜೆಪಿ ಹೈಕಮಾಂಡ್ ಜತೆಗೂ ನಿಯೋಗ ಮಾತುಕತೆ ನಡೆಸಿತ್ತು. ಈ ವೇಳೆ ಕರ್ನಾಟಕದಲ್ಲಿನ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.




