ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ.. ಈ ವರ್ಷ ತೆರೆ ಕಂಡ ‘ಪಠಾಣ್’, ‘ಜವಾನ್’, ‘ಅನಿಮಲ್’ ಮೊದಲಾದ ಸೂಪರ್ ಹಿಟ್ ಸಿನಿಮಾದ ದಾಖಲೆಗಳನ್ನು ಒಂದೇ ದಿನದಲ್ಲಿ ಸರಿಗಟ್ಟಿ, ಮೊದಲ ದಿನವೇ 175 ಕೋಟಿ ರೂಪಾಯಿ ಗಳಿಕೆ ಮಾಡಿದೆ..
ಕ್ರೈಂ ಜೊತೆಗೆ ಸ್ನೇಹದ ಕೊಂಡಿಯನ್ನಿಟ್ಟು ತೆರೆಗೆ ತಂದ ಸಿನಿಮಾ ನಿರೀಕ್ಷೆ ಮೀರಿ ಯಶ ಕಾಣ್ತಿದೆ. ಸಿನಿಮಾದಲ್ಲಿ ಅಷ್ಟೆಲ್ಲಾ ಸೆಂಟಿಮೆಂಟ್ ತೋರಿಸೋ ನಿರ್ದೇಶಕ ರಿಯಲ್ ಲೈಫ್ ನಲ್ಲೂ ಹೀಗೆಯಾ ಎಂಬ ಪ್ರಶ್ನೆಗೆ ನಾನೋರ್ವ ಕೆಟ್ಟ ಪತಿ, ಕೆಟ್ಟ ತಂದೆ, ಕೆಟ್ಟ ಮಗ, ಮತ್ತು ಹಾರಿಬಲ್ ಗೆಳೆಯ. ಸಿನಿಮಾಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ ಎಂದು ಬಹಿರಂಗವಾಗಿ ಮಾತನಾಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ನಾನು ಕುಟುಂಬಕ್ಕೆ ಹೆಚ್ಚು ಸಮಯ ನೀಡುವುದಿಲ್ಲ. ನಾನು ನನ್ನ ಮಕ್ಕಳನ್ನು ಮೂರು ತಿಂಗಳಿಗೆ ಒಮ್ಮೆ ನೋಡುತ್ತೇನೆ. ಅದೂ ಅವರು ಅತ್ತಾಗ. ಆಗ ಓಡೋಡಿಕೊಂಡು ಹೋಗುತ್ತೇನೆ. ನಾನು ಈ ರೀಯಾಲಿಟಿಯನ್ನು ಒಪ್ಪಿಕೊಂಡು ಸ್ವೀಕರಿಸಿದ್ದೇನೆ. ನಾನು ಮಾಡೋ ಸಿನಿಮಾ ಉತ್ತಮವಾಗಿ ಮೂಡಿಬರಬೇಕು ಅನ್ನೋದು ಅಷ್ಟೇ ನನ್ನ ಉದ್ದೇಶ. ಒಂದು ಸಿನಿಮಾ ಮುಗಿದ ಬಳಿಕ ಬ್ರೇಕ್ ತೆಗೆದುಕೊಳ್ಳೋದು ನನ್ನ ಕೈಯಲ್ಲೇ ಇರುತ್ತದೆ ಎಂದು ತಮ್ಮ ಸಿನಿಮಾ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಉಗ್ರಂ, ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಇಡೀ, ಭಾರತೀಯ ಸಿನಿಮಾ ರಂಗ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಕಮಾಲ್ ಮಾಡಿದ್ದು, ತೆಲುಗು ಚಿತ್ರರಂಗಕ್ಕೆ ಇನ್ನೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ ಪ್ರಶಾಂತ್ ನೀಲ್




