ಹುಬ್ಬಳ್ಳಿ: ಹುಬ್ಬಳ್ಳಿ ರಾಜಕೀಯದಲ್ಲಿ ಗುರು ಶಿಷ್ಯರೆಂದೇ ಖ್ಯಾತಿ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಶಾಸಕ ಮಹೇಶ್ ಟೆಂಗಿನಕಾಯಿ ಮಾತಿನ ಯುದ್ಧ ಮುಂದುವರೆದಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಸವಾಲ್ ಹಾಕಿದ ಶಾಸಕ ಮಹೇಶ್ ತೆಂಗಿನಕಾಯಿ, ನಿಮಗೆ ತಾಕತ್ತಿದ್ದರೇ 500 ಕೋಟಿ ರೂಪಾಯಿ ಹಣವನ್ನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ತೆಗೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ.
ಒಂದು ವೇಳೆ ತಾವು ಅನುದಾನ ತಂದಿದ್ದೇ ಆದಲ್ಲಿ ನಾನೇ ನಿಮ್ಮ ಮನೆಗೆ ಬಂದು ಸನ್ಮಾನ ಮಾಡುತ್ತೇನೆ, ತಾಕತ್ತು, ಧಮ್, ನನ್ನ ತಂಟೆಗೆ ಎಂದು ಮಾತನಾಡುವುದನ್ನು ಬಿಟ್ಟು ಬಿಡಿ, ಸಣ್ಣ ಹುಡುಗರ ಹಾಗೇ ಮಾತನಾಡಿದ್ರೆ ಉಪಯೋಗವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಾನ್ ಏನು ಮಾಡಬೇಕು, ನನಗೆ ಏನ್ ಧಮ್ ಇದೆ, ಏನ್ ತಾಕತ್ತ್ ಇದೆ ಎಂದು ನಾನು ತೋರಿಸುತ್ತೇನೆ, ಸರ್ಕಾರ ನಿಮ್ಮದಿದೆ, ಅನುದಾನ ತೆಗೆದುಕೊಂಡು ಬನ್ನಿ, ಹತ್ತು ಕೋಟಿ ಅನುದಾನ ತೆಗೆದುಕೊಂಡು ಬಾ ಎಂದು ನನಗೆ ಹೇಳಿದ್ದಾರೆ, ಅವರು ಹೇಳಿದ್ದನ್ನ ನಾನೂ ಚಾಲೆಂಜಾಗಿ ಸ್ವೀಕಾರ ಮಾಡ್ತೇನಿ, ಹತ್ತು ಕೋಟಿ ತಂದು ತೋರಿಸುತ್ತೇನೆ ಎಂದರು.
ಜಗದೀಶ್ ಶೆಟ್ಟರ್ ಅವರ ಹೆಸರು ಹೇಳದೆ ಪರೋಕ್ಷವಾಗಿ ಸವಾಲು ಹಾಕಿ ಶಾಸಕ ತೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಕ್ಷೇತ್ರ ಅಭಿವೃದ್ಧಿ ಆಗಬೇಕು, ನಾನು ಮಾಡಿದ್ದೇನೆ ಅಂತ ಅಲ್ಲ, ಕ್ಷೇತ್ರ ಅಭಿವೃದ್ಧಿ ಆಗಲಿ ಎಂದರು.
ಹಿಜಾಬ್ ಧರಿಸಬೇಕು ಎನ್ನುವುದು ತುಚ್ಚೀಕರಣದ ಪರಮಾವಧಿ
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿರೋದು ತುಚ್ಚಿಕರಣದ ಪರಮಾವಧಿ ಎಂದು ಆರೋಪಿಸಿದ ಅವರು, ಹಿಜಾಬ್ ನಿಷೇಧ ಪ್ರಕರಣ ನ್ಯಾಯಾಲಯದಲ್ಲಿದೆ. ಇಂತಹ ಸಂದರ್ಭದಲ್ಲಿ ಸಿಎಂ ಹಿಜಾಬ್ ಬಗ್ಗೆ ಹೇಳಿಕೆ ನೀಡೋ ಅವಶ್ಯಕತೆ ಇರಲಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಜಾತಿ, ಮತ, ಪಂಥಗಳಿರಲ್ಲ. ಆದರೆ ಕಾಂಗ್ರೆಸ್ ಇದೀಗ ವಿದ್ಯಾರ್ಥಿಗಳಲ್ಲಿಯೂ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದೆ, ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅನುದಾನ ಬಿಡುಗಡೆ ಮಾಡಲು ಇವರ ಬಳಿ ದುಡ್ಡಿಲ್ಲ. ಇವುಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಇವೆಲ್ಲ ವಿಚಾರಗಳಿಂದ ಡೈವರ್ಟ್ ಮಾಡಲು ಹಿಜಾಬ್ ವಿಚಾರ ಮುಂಚೂಣಿಗೆ ತಂದಿದ್ದಾರೆ ಎಂದು ಆರೋಪಿಸಿದರು.




