HIJAB CONTROVERSY: ರಾಜ್ಯ ಸರ್ಕಾರ ಎಚ್ಚೆತ್ತು ಈ ನಿರ್ಧಾರ ವಾಪಾಸ್ಸು ಪಡೆಯಲು : ಬಿಎಸ್ ವೈ ಸರ್ಕಾರದ ವಿರುದ್ಧ ಕಿಡಿ

ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಷೇಧಿಸಿತ್ತು, ಆದರೆ ಇದೀಗ ಇನ್ನು ನಿಷೇಧವನ್ನು ವಾಪಾಸ್ಸು ಪಡೆಯುವುದಾಗಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತು ಈ ತೀರ್ಮಾನವನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ಅದೇ ರೀತಿಯಲ್ಲಿ ಇದೊಂದು ಭಂಡ ಸರ್ಕಾರ ಎಂದು ಕಿಡಿಕಾರಿದರು.
ಹಿಜಾಬ್ ವಾಪಸ್ ಪಡೆಯಿರಿ ಅಂತ ಯಾವ ಮುಸ್ಲಿಂ ನಾಯಕರು ಹೇಳಿದ್ರು ಇವರಿಗೆ? ಎಂದು ಪ್ರಶ್ನಿಸಿದ ಅವರು, ಅವರ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಲಾಗದೇ ಈ ರೀತಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ, ಕೂಡಲೇ ಹಿಜಾಬ್ ನಿಷೇಧ ವಾಪಸ್ ನಿರ್ಣಯ ಹಿಂದಕ್ಕೆ‌ ಪಡೆಯಲಿ ಎಂದು ಒತ್ತಾಯಿಸಿದರು.
ಇದೊಂದು‌ ಬೇಜವಾಬ್ದಾರಿ ಸರ್ಕಾರ, ಬರಗಾಲವನ್ನು ಈ ಸರ್ಕಾರ ಮರೆತೇ ಬಿಟ್ಟಿದೆ, ಹಿಜಾಬ್ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸುತ್ತೇನೆ, ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ‌ ಅಗತ್ಯ, ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದರು.

More News