ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಸುಮಲತಾ ಬಿಜೆಪಿ- ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಚುನಾವಣೆಯಲ್ಲಿ ಗೆಲುವು ಸಿಕ್ಕಿ ಸಂಸದೆಯಾದ ಬಳಿಕ ಮೋದಿ ಅಲೆ ಕಂಡು ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದ್ದರು. ಈ ಮೂಲಕ ಅವಕಾಶ ಸಿಕ್ಕರೆ ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದರು. ಅದನ್ನು ನೇರವಾಗಿ ಎಲ್ಲೂ ಅವರು ಪ್ರಸ್ತಾಪಿಸಿರಲಿಲ್ಲ. ಆದರೆ ಇದೀಗ ಬಿಜೆಪಿ- ಜೆಡಿಎಸ್ ಮೈತ್ರಿ ಬೆನ್ನಲ್ಲೇ ಮೋದಿ ಪಾಳಯ ಪರೋಕ್ಷವಾಗಿ ಮಂಡ್ಯದಲ್ಲಿ ಸುಮಲತಾಗೆ ಬದಿಗೆ ಸರಿಸುವ ಕಾರ್ಯವನ್ನು ಮಾಡಿದೆ. ಇದು ಜೆಡಿಎಸ್ ಗೆ ವರವಾಗಿ ಪರಿಣಮಿಸಿದೆ.

ಮೊದಲೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸುಮಲತಾಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಾಂಗ್ ನೀಡಲು ಜೆಡಿಎಸ್ ತಂತ್ರ ಹೆಣೆದಿದೆ. ಅಷ್ಟೇ ಅಲ್ಲದೆ ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರವೂ ಚರ್ಚೆಯಲ್ಲಿದೆ.ಹೀಗಾಗಿ ಸುಮಲತಾ ಅಂಬರೀಶ್ ನಡೆ ಕುತೂಹಲ ಮೂಡಿಸಿದೆ.
ಇನ್ನೊಂದೆಡೆ ಬಿಜೆಪಿ- ಕಾಂಗ್ರೆಸ್ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೆ ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆಯೂ ಎದುರಾಗಿದೆ. ಇದಕ್ಕೆ ಪೂರಕವಾಗಿ ಕಾಟೇರಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್, ಸುಮಲತಾ ಅಂಬರೀಶ್ ಅವರಿಗೆ ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ ಎಂದು ಮಂಡ್ಯ ಜನರಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಬಿಜೆಪಿ-ಜೆಡಿಎಸ್ ಮಧ್ಯೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆ. ಜೆಡಿಎಸ್ ಜೊತೆಗೆ ಹೆಚ್ಚಿನ ರಾಜಕೀಯ ಸಂಘರ್ಷ ಕಂಡಿದ್ದಾರೆ ಸುಮಲತಾ. ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸುಮಲತಾ ಅಂಬರೀಶ್ ಅವರನ್ನು ಕ್ಷೇತ್ರದಿಂದ ದೂರ ಸರಿಸಲು ಜೆಡಿಎಸ್ ಪ್ರಯತ್ನಿಸುತ್ತದಾ ಎಂಬ ಪಶ್ನೆಯೂ ಇದೆ.
ಅಂತಿಮವಾಗಿ ಬಿಜೆಪಿ- ಜೆಡಿಎಸ್ ಮೈತ್ರಿ ಪಾಳಯದಿಂದ ಟಿಕೆಟ್ ಸಿಗಲಿ, ಬಿಡಲಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್ನಿಂದ ಟಿಕೆಟ್ ಸಿಗದೇ ಹೋದರೆ ಕಾಂಗ್ರೆಸ್ ಟಿಕೆಟ್ಗೆ ಸುಮಲತಾ ಪ್ರಯತ್ನಿಸಬಹುದು. ಕಾಂಗ್ರೆಸ್ ನಲ್ಲೂ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂದು ಹೇಳಲಾಗಿದೆ.
ಈ ಹಿಂದೆ ಸ್ವತಃ ಸುಮಲತಾ ಅವರೇ ತಾನು ಮಂಡ್ಯದಿಂದ ಎಲ್ಲೂ ಹೋಗಲ್ಲ ಎಂದಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಆ ವೇಳೆ ನಟರಾದ ದರ್ಶನ್ ಮತ್ತು ಯಶ್ ಸುಮಲತಾ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಿದ್ದರು.




