Farmer Committed Suicide: ಸಾಲಬಾದೆ ತಾಳಲಾರದೆ ರೈತ ಆತ್ಮಹತ್ಯೆ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ ರೈತರು

ಹಾವೇರಿ: ಸಾಲಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಾಬಾಳದಲ್ಲಿ ನಡೆದಿದೆ.

ಚಂದ್ರಪ್ಪ ನಂಡುಪ್ಪ ಚನ್ನಾಪುರ ಆತ್ಮಹತ್ಯೆ ಮಾಡಿಕೊಂಡ ಅನ್ನದಾತ. ಚಂದ್ರಪ್ಪ ನಂಡುಪ್ಪ ಗೆ ಶಾಬಾಳದಲ್ಲಿ
4.5 ಎಕರೆ ಜಮೀನು ಇದೆ. ಭೂ ತಾಯಿಯನ್ನ ನಂಬಿ ಬೆಳೆ ಬೆಳೆಯಲು ವಿವಿಧ ಬ್ಯಾಂಕ್ ಗಳಲ್ಲಿ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಆದ್ರೆ ಬೆಳೆದಿದ್ದ ಗೋವಿನಜೋಳ ಕೈಕೊಟ್ಟ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳೆಯನ್ನ ನಂಬಿ ರೈತ ಚಂದ್ರಪ್ಪ ಸಾಲ ಮಾಡಿಕೊಂಡಿದ್ದಾರೆ. ಇತ್ತ ಬೆಳೆದ ಬೆಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಸಾಲ ತೀರಿಸುವುದು ಹೇಗೆಂದು ತೋಚದೇ ಮನನೊಂದು ರೈತ ಚಂದ್ರಪ್ಪ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳಿಂದ ರೈತರ ಆತ್ಮಹತ್ಯೆ ವರದಿ ದಾಖಲಾಗುತ್ತಲೇ ಇದೆ. ರೈತರ ಆತ್ಮಹತ್ಯೆ ವೇಳೆ ಜನ ಪ್ರತಿನಿಧಿಗಳು ಮನೆಗೆ ಭೇಟಿ ಕೊಟ್ಟು ನೋಡಿಕೊಂಡು ಹೋದದ್ದು ಬಿಟ್ಟರೆ, ರೈತರ ಪರವಾಗಿ ಸರ್ಕಾರದ ಕಡೆಯಿಂದ ಯಾವುದೇ ಪರಿಹಾರ ಕ್ರಮ ಸಿಗುತ್ತಿಲ್ಲ. ಇದೀಗ ರೈತ ಚಂದ್ರಪ್ಪ ಕೂಡ ಆತ್ಮಹತ್ಯೆಗೆ ಶರಣಾಗಿದ್ದು ಗ್ರಾಮಸ್ಥರನ್ನ ಕೆರಳಿಸಿದೆ. ಚಂದ್ರಪ್ಪ ಆತ್ಮಹತ್ಯೆಯಿಂದ ಕೆಂಡಾಮಂಡಲರಾದ ಗ್ರಾಮಸ್ಥರು ಬಂಕಾಪುರ ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ ಬೆಳವಣಿಗೆ ನಡೆಯಿತು.

More News