ಬೆಂಗಳೂರು : ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೋ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆಗ್ರಹಿಸಿದ್ದಾರೆ.
ಇಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಂಸದ ಸದಾನಂದಗೌಡ ಅವರು ಹೇಳಿರುವ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ಬೇರೆಯವರು ನಡೆಸಿದ ರೀತಿಯಲ್ಲಿ ನಾವೇನು ಅಂತಹ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇವಾ ಎಂದು ಪ್ರಶ್ನಿಸಿದ ಅವರು, ಪಕ್ಷದಲ್ಲಿ ಹೇಳೊವ್ರು ಕೇಳೋವ್ರು ಇಲ್ಲ ಅಂತಿದ್ದಾರೆ, ಪಕ್ಷದಲ್ಲಿ ವಿಜಯೇಂದ್ರ ಅಧ್ಯಕ್ಷರು ಇದ್ದಾರೆ, ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಒಳ್ಳೆ ಕಮಿಟಿ ಮಾಡಿದ್ದಾರೆ, ದಿನದಿಂದ ದಿನಕ್ಕೆ ಎಲ್ಲವನ್ನ ಸರಿ ಮಾಡುತ್ತಾರೆ ಎಂಬ ಆಶಾವಾದ ವ್ಯಕ್ತಪಡಿಸಿದರು.
ತಮ್ಮ ಕ್ಷೇತ್ರದ ವಿಚಾರವಾಗಿ ಇಂದು ಗೃಹ ಸಚಿವರನ್ನು ಭೇಟಿಯಾಗಿದ್ದೆ ಎಂದು ಸ್ಪಷ್ಟಪಡಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಮಾಗಡಿ ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗ್ತಾ ಇದೆ, ಹಾಗಾಗಿ ಒಂದು ಪೊಲೀಸ್ ಸ್ಟೇಷನ್ ಬೇಕು ಅಂತ ಮನವಿ ಮಾಡಿದ್ದೇವೆ ಎಂದರು.




