ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ-ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ರಾಜಕೀಯವಾಗಿ ಬಿಜೆಪಿ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಟೆಲಿಕಾಲಿಂಗ್ ಸರ್ವೇ ನಡೆಸುತ್ತಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಗೆದ್ದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಟಕ್ಕರ್ ಕೊಡಲು ಕೈ ಪಡೆ ಸಜ್ಜಾಗಿದೆ.ಹೀಗಾಗಿ ಕಾಂಗ್ರೆಸ್ ಪಕ್ಷವು, ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಯಾವ ಪಕ್ಷಗಳನ್ನು ಬೆಂಬಲಿಸುತ್ತಾರೆ? ಯಾವ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂದು ಎರಡು ಹಂತದಲ್ಲಿ ಟೆಲಿಕಾಲಿಂಗ್ ಸರ್ವೆ ಕೈಗೊಂಡಿದೆ.

ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ನ ರಜತ್ ಉಳ್ಳಾಗಡ್ಡಿಮಠ ಹಾಗು ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಕೂಡಾ ಟೆಲಿಕಾಲಿಂಗ್ ರೇಸ್ನಲ್ಲಿರುವುದು ವಿಶೇಷ.
ಈ ಬಾರಿಯ ಲೋಕಸಭಾ ಚುನಾವಣಾ ರೇಸ್ ನಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ರಜತ ಉಳ್ಳಾಗಡ್ಡಿ, ಮೋಹನ್ ಲಿಂಬಿಕಾಯಿ, ವಿಜಯ ಕುಲಕರ್ಣಿ, ಮಯೂರ ಮೋರೆ, ರಾಜಶೇಖರ್ ಮೆಣಸಿನಕಾಯಿ ಸೇರಿದಂತೆ 17 ಮಂದಿ ಆಕಾಂಕ್ಷಿಗಳಿದ್ದಾರೆ.

ಇತ್ತೀಚೆಗೆ ನಡೆದ ಉಸ್ತುವಾರಿಸಭೆಯಲ್ಲಿ ಈ ಆಕಾಂಕ್ಷಿ ಅಭ್ಯರ್ಥಿಗಳೆಲ್ಲ ಧಾರವಾಡ ಲೋಕಸಭಾ ಚುನಾವಣಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಅರ್ಜಿ ಸಲ್ಲಿಸದ ಮುಖಂಡರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಕಣ್ಣು ನೆಟ್ಟಿದೆ.
ಇನ್ನು ಜಗದೀಶ್ ಶೆಟ್ಟರ್ ಮನೆಗೆ ಭೇಟಿ ನೀಡಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು, ಜಗದೀಶ್ ಶೆಟ್ಟರ್ ಸಹ ಟಿಕೆಟ್ ಆಕಾಂಕ್ಷಿ ಎಂದು ನಾವು ಅಂದುಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈ ವೇಳೆ ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ ಶೆಟ್ಟರ್, ನಾನು ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನೊಂದೆಡೆ ಕೈಪಡೆ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾಗೆ ಆಫರ್ ನೀಡಿದ್ದು, ಇದುವರೆಗೂ ಕುಲಕರ್ಣಿ ಕುಟುಂಬದ ಸದಸ್ಯರು ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಮತ್ತೊಂಡು ಕಡೆ ಕಳೆದ ಬಾರಿಯ ವಿಧಾನಸಭಾ ಚುಣಾವಣೆಯಲ್ಲಿ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಟಿಕೆಟ್ ವಂಚಿತರಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಕೂಡಾ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಂತಿಮವಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರರನ್ನು ಕಟ್ಟಿಹಾಕಲು ಕಾಂಗ್ರೆಸ್ ಸೂಕ್ತ ವ್ಯಕ್ತಿಗಾಗಿ ಹುಡುಕಾಟ ನಡೆಸಿದೆ.