ಚಿತ್ರದುರ್ಗ: ಶ್ರೀಮಂತಿಕೆಯಿದ್ದರೂ ನೆರವೇರದ ಮಕ್ಕಳ ಮದುವೆ, ದರೋಡೆ ಕೃತ್ಯದಲ್ಲಿ ಪುತ್ರ ಭಾಗಿ, ಅಪಘಾತದಲ್ಲಿ ಮೃತಪಟ್ಟಿದ್ದ ಪುತ್ರ.. ಬೋನ್ ಮ್ಯಾರೋನಿಂದ ಬಳಲುತ್ತಿದ್ದ ಮಗಳು.. ಹೀಗೆ ಸಾಲು ಸಾಲು ನೋವುಗಳಿಂದ ಬೇಸತ್ತಿದ್ದ ಕುಟುಂಬ ಒಂದು ದಿನ ಸಾಮೂಹಿಕವಾಗಿ ಉಸಿರು ನಿಲ್ಲಿಸಿತು. ನಗರದಲ್ಲಿ ತಲ್ಲಣ ಸೃಷ್ಟಿಸಿದ್ದ ಅಸ್ಥಿಪಂಜರ ಪತ್ತೆ ಪ್ರಕರಣ ಇದೀಗ ಮತ್ತೊಂದು ತಿರುವನ್ನ ಪಡೆದಿದೆ.
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಮತ್ತು ಚಿತ್ರದುರ್ಗ ನಗರವನ್ನು ತಲ್ಲಣಗೊಳಿಸಿದ ಐದು ಅಸ್ಥಿಪಂಜರಗಳು ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯಾದರೂ ಎರಡು ತಿಂಗಳ ಹಿಂದೆಯೇ ಅಸ್ಥಿ ಪತ್ತೆಯಾಗಿದೆ ಎಂಬ ಆಘಾತಕಾರಿ ಸುದ್ದಿ ಒಂದು ಬಹಿರಂಗವಾಗಿದೆ.

ಚಿತ್ರದುರ್ಗದ ಕ್ರಿಕೆಟ್ ಆಡುವ ಯುವಕರ ತಂಡ ಎರಡು ಮೂರು ತಿಂಗಳ ಹಿಂದೆಯೇ ಈ ಪಾಳು ಮನೆಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಅಸ್ಥಿ ಪಂಜರದ ಮುಂದೆಯೇ ನಗುನಗುತ್ತಲೇ ರೀಲ್ಸ್ ಮಾಡಿದ್ದು, ಇದು ಪೊಲೀಸರಿಗೂ ತಲೆನೋವು ಮತ್ತು ಅಚ್ಚರಿ ತಂದಿದೆ.
ಹುಡುಗರು ಬಿಡುಗಡೆ ಮಾಡಿದ್ದ ರೀಲ್ಸ್ ನಲ್ಲಿ, ಹುಡುಗರು ಮನೆಯೊಳಗೆ ಹೋಗುತ್ತಾರೆ.. ಹೋಗುತ್ತಲೇ” ಬಾರಲೇ ನನಗೆ ಹೆದರಿಕೆ ಆಗ್ತದೆ” ಎಂದು ಹೇಳುತ್ತಾ.. ನೋಡಲೇ ಒಂದು, ಎರಡು, ಮೂರು ಅಲ್ಲಿ ನೋಡಲೇ ನಾಲ್ಕು ಐದು. ಯಪ್ಪಾ ನಾಯಿ.. ಎಂದು ರೀಲ್ಸ್ ಮಾಡಿದ್ದು ಅದಕ್ಕೆ ಮ್ಯೂಸಿಕ್ ನ್ನೂ ಹಾಕಿದ್ದಾರೆ. ಐದು ಅಸ್ಥಿಪಂಜರ ಪತ್ತೆ ಪ್ರಕರಣ ಸುದ್ದಿ ಬೆನ್ನಲ್ಲೇ ಹುಡುಗರ ರೀಲ್ಸ್ ಕೂಡ ಬಯಲಿಗೆ ಬಂದಿದೆ.