ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ನೂತನ ವರ್ಷ ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ.
ವರ್ಷದ ಅಂತಿಮ ದಿನಕ್ಕೆ ಬೀಳ್ಕೊಡಲು ಹಾಗು ನೂತನ ವರ್ಷವನ್ನು ಬರಮಾಡಿಕೊಳ್ಳಲು ರಾಜಧಾನಿಯ ಪ್ರಮುಖ ರಸ್ತೆಗಳು, ಹೋಟೆಲ್, ಪಬ್, ಮಾಲ್ ಗಳೆಲ್ಲ ಮದುವಣಗಿತ್ತಿಯಂತೆ ಶೃಂಗರಿಸಿಕೊಂಡಿದ್ದು ರಂಗೇರಿವೆ.
ಹೊಸ ವರುಷದ ಸಂಭ್ರಮದಲ್ಲಿ ಮಿಂದೇಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ನಗರದ ಎಂ.ಜಿ.ರಸ್ತೆ, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿ ಒಳಗೊಂಡಂತೆ ಜನಜಂಗುಳಿಯ ರಸ್ತೆಗಳೆಲ್ಲ ಜಗಮಗಿಸುತ್ತಿದ್ದು, ವರ್ಷಾಚರಣೆಗೆ ಗರಿಗೆದರಿ ನಿಂತಿವೆ.

ಸಾವಿರಾರು ಜನರು ಒಂದೆಡೆ ಸೇರುವ ಜಾಗದಲ್ಲಿ ಪ್ರತಿ ವರ್ಷ ಕಟ್ಟೆಚ್ಚರ ವಹಿಸಿದ್ದರೂ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆಯುತ್ತವೆ. ಹೀಗಾಗಿ ಸಂಭ್ರಮದ ಗುಂಗಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪ್ರತಿ ವರ್ಷದಂತೆ ಈ ವರ್ಷವೂ ಮಹಿಳಾ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಪ್ರತಿ ರಸ್ತೆಯಲ್ಲೂ ಮಹಿಳಾ ಸುರಕ್ಷತಾ ತಾಣ ನಿರ್ಮಿಸಲಾಗಿದೆ. ಜತೆಗೆ ಸಿಸಿಟಿವಿ ಕಣ್ಗಾವಲು, ಎಲ್ಲೆಲ್ಲೂ ಪೊಲೀಸರ ಗಸ್ತು ಒದಗಿಸಲಾಗಿದೆ.
ಇದಕ್ಕೆ ತಕ್ಕಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ರಸ್ತೆಯ ಎರಡೂ ಕಡೆ ಫೋಕಸ್ ಲ್ಯಾಟ್ ಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯು ಯಾವುದೇ ಕೆಟ್ಟ ಘಟನೆಗಳಿಗೆ ಆಸ್ಪದ ನೀಡದಂತೆ ನಗರದ ಎಲ್ಲಾ ಪಬ್, ರೆಸ್ಟೋರೆಂಟ್ ಗಳಿಗೆ ಈಗಾಗಲೇ ಎಚ್ಚರಿಕೆಯನ್ನೂ ನೀಡಿದೆ.