DK Shivakumar Case: ನನ್ನ ರಾಜಕೀಯವಾಗಿ ಮುಗಿಸೋಕೆ ದೊಡ್ಡ ಪ್ಲ್ಯಾನ್ ನಡೆಯುತ್ತಿದೆ: ಡಿಕೆ ಶಿವಕುಮಾರ್

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ದೊಡ್ಡದೊಂದು ಷಡ್ಯಂತ್ರ ನಡೀತಾ ಇದೆ. ದೊಡ್ಡವರು ಕೂತು‌ ಮಾಡುತ್ತಿದ್ದಾರೆ. ದೊಡ್ಡದೊಂದು ಪ್ಲ್ಯಾನ್ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ರ ಕೇರಳ ಮೂಲದ ಜೈಹಿಂದ್ ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ನೀಡುವಂತೆ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಹೊರಡಿಸಲಾದ ನೋಟಿಸ್‌ನಲ್ಲಿ, ಡಿಕೆ ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಮಾಡಿದ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶ, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಅವರ ಬ್ಯಾಂಕ್ ವಿವರಗಳನ್ನು ಒದಗಿಸುವಂತೆ ಸಿಬಿಐ ಚಾನಲ್‌ಗೆ ಕೇಳಿದೆ.

ಜೈ ಹಿಂದ್ ಚಾನಲ್ ಹೂಡಿಕೆ ಕುರಿತು ನೋಟೀಸ್ ಕೊಟ್ಟ ವಿಚಾರದ ಕುರಿತು ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಜೈಹಿಂದ್ ಮಾಧ್ಯಮಕ್ಕೆ ಅಷ್ಟೆ ಕೊಟ್ಟಿಲ್ಲ..ಹಾಪ್ ಕಾಮ್ಸ್, ಸಬ್ ರಿಜಿಸ್ಟಾರ್ ಗಳಿಗೂ ಕೊಟ್ಟಿದ್ದಾರೆ. ಸರ್ಕಾರ ಸಿಬಿಐಗೆ ಕೊಟ್ಟ ಅನುಮತಿ ಹಿಂಪಡೆದಿದೆ. ಆದರೂ ಕೂಡ ಯಾವ ಲೆಕ್ಕಾಚಾರದಲ್ಲಿ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ.
ಎಲ್ಲಾ ದಾಖಲೆಗಳು ಅವರ ಬಳಿ ಇವೆ..ಈ ಕೇಸ್ ನಲ್ಲಿ ಸರ್ಕಾರ ಅನುಮತಿ ಹಿಂಪಡೆದಿದೆ. ಆ ಪ್ರಕಾರ ಎಲ್ಲಾ ದಾಖಲೆಗಳನ್ನ ಲೋಕಾಯುಕ್ತಕ್ಕೆ ಕೊಡಬೇಕು. ನನಗೆ ಇರುವ ಕಾನೂನಿನ ಜ್ಞಾನ ಇದು. ನಾನೇನು ಲಾಯರ್ ಅಲ್ಲ, ನನಗಿರುವ ಕಾನೂನಿನ ಅರಿವಿನಲ್ಲಿ ದಾಖಲೆಗಳನ್ನ ಲೋಕಾಯುಕ್ತಕ್ಕೆ ಕೊಡಬೇಕು. ಈಗ ಕಿರುಕುಳ ನೀಡೋಕೆ ನೋಟಿಸ್ ಕೊಟ್ಟಿದ್ದಾರೆ ಎಂದು ದೂರಿದರು.

ಬೇಕಿದ್ರೆ ನನ್ನನ್ನು ಒಳಗೆ ಹಾಕಿಕೊಳ್ಳಲಿ

ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೂ ನನ್ನ ಹರಾಸ್ಮೆಂಟ್ ಮಾಡಲು‌ ನೋಟಿಸ್ ಕೊಟ್ಟಿದ್ದಾರೆ. ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೀತಾ ಇದೆ. ದೊಡ್ಡವರು ಕೂತು‌ ಮಾಡುತ್ತಿದ್ದಾರೆ. ದೊಡ್ಡ ಪ್ಲ್ಯಾನ್ ನಡೆಯುತ್ತಿದೆ. ನಾನು ಏನು ತಪ್ಪು ಮಾಡಿಲ್ಲ. ಆದರೂ ನನ್ನ ಸಂಸ್ಥೆಗೆ ನೋಟೀಸ್ ಬಂದಿದೆ. ನನ್ನ ಮಕ್ಕಳು,ಹೆಂಡತಿ ಗೆ ನೋಟೀಸ್ ಬಂದಿದೆ. ವೈಯಕ್ತಿಕವಾಗಿ ನೋಟೀಸ್ ಬಂದಿಲ್ಲ. ಆಮೇಲೆ ನನ್ನ ಹತ್ತಿರ ಬರ್ತಾರೆ. ಸಿಬಿಐ ೧೦% ತನಿಖೆ ಮಾಡಿರಲಿಲ್ಲ.೯೦% ತನಿಖೆ ಮಾಡಿದ್ದೇವೆ ಅಂತ ಕೋರ್ಟ್ ಗೆ ಹೇಳಿದ್ರು. ಅಷ್ಟು ತನಿಖೆ ಆಗಿಲ್ಲ.‌ಬೇಕಿದ್ರೆ ನನ್ನನ್ನು ಒಳಗೆ ಹಾಕಿಕೊಳ್ಳಲಿ ಎಂದರು.

More News