ರೈಲಿನ ಮೇಲೆ ಬಂಡೆಗಳು ಉರುಳಿ ಹಳಿತಪ್ಪಿದ 5 ಬೋಗಿಗಳು: ತಪ್ಪಿದ ಭಾರೀ ಅನಾಹುತ

ಬೆಂಗಳೂರು : ಕಣ್ಣೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲಿನ ಮೇಲೆ ಭಾರೀ ಗಾತ್ರದ ಬಂಡೆಗಳು ಉರುಳಿಬಿದ್ದ ಪರಿಣಾಮ ಐದು ಭೋಗಿಗಳು ಹಳಿ ತಪ್ಪಿವೆ. ಇಂದು ಮುಂಜಾನೆ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಈ ಘಟನೆ ಜರುಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಗಳೂರು ಸೇಲಂ ವಿಭಾಗದಲ್ಲಿ ಬರುವ ತಪ್ಪೂರು ಶಿವದಿ ಮಾರ್ಗದಲ್ಲಿ ಈ ಘಟನೆ ಸಂಭವಿದೆ. ಕಣ್ಣೂರಿನಿಂದ ನಿನ್ನೆ ಸಂಜೆ ಈ ರೈಲು ಬೆಂಗಳೂರು ಕಡೆಗೆ ಹೊರಟಿತ್ತು. ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು ಪರಿಹಾರ ಕಾರ್ಯ ನಡೆಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈ ಘಟನೆ ಸಂಭವಿಸಿದೆ ಎಂದು ವಿಶ್ಲೇಷಿಸಲಾಗಿದೆ.


ರೈಲಿನಲ್ಲಿ ಒಟ್ಟು 2359 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರನ್ನು ಸೇಲಂ ಕಡೆಗೆ ಬಸ್ ನಲ್ಲಿ ಕಳುಹಿಸಿಕೊಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ. ಬೆಂಗಳೂರು – 080-22156554, ಹೊಸೂರು- 04344222603 ಸಂಪರ್ಕಿಸಿ ತಮ್ಮವರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.


ರೈಲುಗಳ ಓಡಾಟದಲ್ಲಿ ಬದಲಾವಣೆ
ಹಾಗೆಯೇ ಆ ಮಾರ್ಗವಾಗಿ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರು – ಎರ್ನಾಕುಲಂ ಮತ್ತು ಬೆಂಗಳೂರಿಗೆ ಆಗಮಿಸುವ ನಾಗರ್ ಕೋಯಿಲ್ ಜಂಕ್ಷನ್- ಬೆಂಗಳೂರು ರೈಲುಗಳು ಪರ್ಯಾಯ ಮಾರ್ಗದಲ್ಲಿ ತೆರಳಲಿವೆ ಎಂದು ರೈಲ್ವೆ ಅಆಧಿಕಾರಿಗಳು ತಿಳಿಸಿದ್ದಾರೆ.

More News