ಬೆಂಗಳೂರು: ಸ್ಪೆಸಿಫಿಕ್ ಆಗಿ ಅಯೋಧ್ಯೆಯ ಕೇಸ್ ಒಂದೇ ಆಗಿಲ್ಲ. ಎಲ್ಲ ಪ್ರಕರಣಗಳನ್ನೂ ಪರಾಮರ್ಶೆ ಮಾಡಿ, ಆರೋಪಿಗಳ ವಿರುದ್ಧ ಇದ್ದ ಹಳೆಯ ಕೇಸ್ ಗಳನ್ನೂ ಪರಾಮರ್ಶಿಸಿ
ಬಂಧಿಸಲಾಗಿದೆ. ಅಯೋಧ್ಯೆ ಸಂದರ್ಭದಲ್ಲಿ ನಡೆದ ಗದ್ಧಲ ಘಟನೆಗೆ ಸಾಕ್ಷಿಯಾದವ್ರನ್ನ ಬಂಧಿಸಿದ್ದು ಕಾಕತಾಳೀಯ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಸುಮಾರು 31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ನೀಡಲು ಪೊಲೀಸರು ಮುಂದಾಗಿದ್ದು, ಈ ಘಟನೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಕಾರ್ಯಕರ್ತರಿಗೆ ಬಂಧನದ ಭೀತಿ ಶುರುವಾಗಿದೆ. ಹುಬ್ಬಳ್ಳಿ ನಗರದಲ್ಲಿ ಮೂರು ದಶಕಗಳ ಹಿಂದೆ ನಡೆದ ರಾಮ ಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಿದ ಪ್ರಕರಣ ನಡೆದಿತ್ತು. ಈ ಸಂಬಂಧ ಹುಬ್ಬಳ್ಳಿ ಶಹರ ಠಾಣೆಯಲ್ಲಿ ೯ ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಈ ಹಳೆಯ ಪ್ರಕರಣ ಮರುಜೀವ ಪಡೆದುಕೊಂಡಿದೆ. ಅಂದು ಗಲಭೆಯಲ್ಲಿ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಘಟನೆಗೆ ಕಾರಣಕರ್ತರಾದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ಆರಂಭಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ಬಳಿಕ ಮೂರನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಪೊಲೀಸರ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಯವರ ಬಂಧನ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಯಡಿಯೂರಪ್ಪನವರೂ ಸರ್ಕಾರ ನಡೆಸಿದ್ದಾರೆ. ಸ್ಪೆಸಿಫಿಕ್ ಆಗಿ ಅದೊಂದೇ ಕೇಸ್ ಆಗಿಲ್ಲ. ಎಲ್ಲ ಪ್ರಕರಣಗಳನ್ನೂ ಪರಾಮರ್ಶೆ ಮಾಡುವಾಗ ಇದೂ ಆಗಿದೆ. ಸುಮ್ಮನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡಬಾರದು. ನೆಲದ ಕಾನೂನಿನ ಪ್ರಕಾರ ಮಾಡಿದ್ದಾರೆ. ಬಾಕಿ ಉಳಿದ ಅರೆಸ್ಟ್ ಆದವರು ಹಿಂದೂಗಳಲ್ವಾ? ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವಾ? ಕಾನೂನು ಪ್ರಕಾರ ಏನು ಆಗುತ್ತದೆಯೋ ಆಗುತ್ತದೆ. ಇದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲ. ಎಲ್ಲಾ ಕಡೆಯೂ ಹಳೆಯ ಪ್ರಕರಣಗಳ ಪರಾಮರ್ಶೆ ಮಾಡ್ತಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು, ಈ ಕಡೆಯಾದರೂ ನ್ಯಾಯ ಆಗಬೇಕು ಅಥವಾ ಆ ಕಡೆಯಾದರೂ ಆಗಬೇಕು. ಅಯೋಧ್ಯ ಸಂದರ್ಭದಲ್ಲಿ ಬಂಧನ ಆಗಿದ್ದು ಕಾಕತಾಳೀಯ ಅಷ್ಟೇ. ನಮಗೇನೂ ಕಮಿಷನರ್ ಗಮನಕ್ಕೆ ತಂದು ಅರೆಸ್ಟ್ ಮಾಡಿಲ್ಲ. ನಮ್ಮ ಪೊಲೀಸರಿಗೆ ಕಾನೂನು ಪುಸ್ತಕ ಕೊಟ್ಟಿಲ್ವಾ? ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.