ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿಯಿಂದ ಹದಿನೈದು ಶಾಸಕರು ಕಾಂಗ್ರೆಸ್ ಶೀಘ್ರದಲ್ಲೇ ಸೇರಪ್ಡೆಯಾಗಲಿದ್ದಾರೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಕ್ಷಕ್ಕೆ ಬರಲು ಶಾಸಕರು ಸಿದ್ಧರಿದ್ದಾರೆ, ಶೀಘ್ರದಲ್ಲೇ ಸೇರಲಿದ್ದಾರೆ, ಕಾದು ನೋಡಿ ಎಂದು ತಿಳಿಸಿದರು.
ಬಿಜೆಪಿ, ಜೆಡಿಎಸ್ ನವರು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರ್ಕಾರ ಉರುಳುತ್ತೆ ಅಂತಾ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ನಾಯಕರ ವಿರುದ್ಧವೇ ಅಸಮಾಧಾನ ಹೆಚ್ಚಾಗಿದೆ, ಅಶೋಕ್, ವಿಜಯೇಂದ್ರ ವಿಚಾರವಾಗಿ ಅಸಮಾಧಾನ ಇದೆ, ಅದನ್ನ ಮುಚ್ಚಿಕೊಳ್ಳಲು ಸರ್ಕಾರದ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದವರ ಸ್ಪರ್ಧೆ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನಾಗಲೀ, ನಮ್ಮ ಕುಟುಂಬದವರಾಗಲೀ ಯಾರೂ ಸ್ಪರ್ಧಿಸೋದಿಲ್ಲ ದು ವದಂತಿಗಳಿಗೆ ತೆರೆಎಳೆದರು. ನಾನು ಎಂಪಿ ಚುನಾವಣಾ ಅಭ್ಯರ್ಥಿಯಾಗಬೇಕೆಂದು ಹೈಕಮಾಂಡ್ ಪ್ರಪೋಸಲ್ ಕೊಟ್ಟಿಲ್ಲ, ಸಿಎಂ, ಡಿಸಿಎಂ ಕೂಡ ಈ ಬಗ್ಗೆ ಮಾತನ್ನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿಎಂಗೆ ಆಹ್ವಾನ ನೀಡಿಲ್ಲ
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಅವರಿಗೆ ಇನ್ನೂ ಆಹ್ವಾನ ನೀಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ, ಅವರಿಗೆ ಇನ್ನೂ ಆಹ್ವಾನ ನೀಡಿಲ್ಲ, ಬಿಜೆಪಿಯವರು ಚುನಾವಣೆ ಬಂದಾಗ ಧರ್ಮ ಮುಂತಾದ ಸೂಕ್ಷ್ಮ ವಿಚಾರಗಳನ್ನು ಕೈಗೆತ್ತಿಕೊಳ್ತಾರೆ ಎಂದು ಕಿಡಿಕಾರಿದರು.
ಚುನಾವಣಾ ರಾಜಕಾರಣಕ್ಕೆ ಒಂದು ವಿಷಯ ಬೇಕು, ಹಾಗಾಗಿ ಈಗ ರಾಮಮಂದಿರ ವಿಷಯ ಎತ್ತಿಕೊಂಡಿದ್ದಾರೆ, ಅವರು ಎಷ್ಟು ರಾಮನ ಜಪ ಮಾಡುತ್ತಾರೋ ಅದಕ್ಕಿಂತಲೂ ಹೆಚ್ಚು ನಾವು ಜಪ ಮಾಡುತ್ತೇವೆ, ಆದರೆ, ಅವರು ಚುನಾವಣೆ ಕಾರಣಕ್ಕೆ ಧರ್ಮದ ವಿಚಾರಗಳನ್ನ ಎತ್ತಿಕೊಳ್ತುತ್ತಾರೆ ಎಂದರು.