ಬೆಂಗಳೂರು: ಕುಂಬಳಗೋಡು, ಶಿವಮೊಗ್ಗ ಶ್ರೀಗಳು ನನ್ನನ್ನು ಸಾಯಿಸಲು ಹೊಂಚು ಹಾಕಿದ್ದಾರೆ ಎಂದು ಹೆಸರಘಟ್ಟ ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿ ವಿದ್ಯಾಧರನಾಥ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಅವರು, ನಮಗಿಂತ ಮೇಲೆ ಬೆಳೆದು ಬಿಡ್ತಾರೆ ಎಂಬ ಕಾರಣಕ್ಕೆ ನನ್ನನ್ನು ಕೊಲ್ಲಲು ಕುಂಬಳಗೋಡು, ಶಿವಮೊಗ್ಗ ಶ್ರೀಗಳು ಸಂಚು ರೂಪಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಮಗೂ ಅವರಿಗೂ ದ್ವೇಷವೇನೂ ಇಲ್ಲ. ಅಧಿಕಾರಕ್ಕಾಗಿ ಕೊಲೆ ಮಾಡಲು ಯತ್ನಿಸುತ್ತಿದ್ದಾರೆ. ಜೀವ ಬೆದರಿಕೆ ಇರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.
“ಇದೇ ಮೊದಲ ಬಾರಿ ಏನಲ್ಲ.. ಈ ಹಿಂದೆಯೂ ಗೃಹಸಚಿವ ಆರಗ ಜ್ಞಾನೇಂದ್ರ, ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೆ. ಆದ್ರೆ ಅವ್ರು ನನ್ನ ರಕ್ಷಣೆಗಾಗಿ ರಿವಾಲ್ವರ್ ಅನ್ನು ಕೂಡ ಕೊಟ್ಟಿಲ್ಲ. ನಮ್ಮ ಮಠಕ್ಕೆ ಒಬ್ಬರನ್ನು ಕೆಲಸಕ್ಕೆ ಬರುವುದಕ್ಕೆ ಬಿಡುತ್ತಿಲ್ಲ. ಒಬ್ಬನೇ ಏನು ಮಾಡ್ತಾನೋ ನೋಡೋಣ ಅಂದುಕೊಂಡಿದ್ದಾರೆ. ಸಾಯಿಸೋಕೆ ಯಾವೆಲ್ಲ ಕ್ರಮವನ್ನು ಅನುಸರಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಬಹಳ ವರ್ಷಗಳಿಂದ ಸಾಯಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲಾ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ಬಂದಿದೆ. ಆದ್ರು ಏನು ಕ್ರಮ ಕೈಗೊಳ್ಳುತ್ತಿಲ್ಲ. ಈ ಕೊಲೆ ಬೆದರಿಕೆಯ ಬಗ್ಗೆ ಎಲ್ಲರಿಗೂ ಗೊತ್ತಾದ ಮೇಲೆ ಅವರಿಗೆ ಗೊತ್ತಿರಲ್ವಾ. ಅವರಿಗೂ ಕೂಡ ಗೊತ್ತಿರುತ್ತೆ ಏನು ಮಾಡ್ತಿಲ್ಲ. ನಮ್ಮ ಶ್ವಾನಗಳನ್ನು ಸಾಯಿಸಲಿಕ್ಕೆ ಬಹಳಷ್ಟು ಸಲ ಹೊಂಚು ಹಾಕಿದ್ದಾರೆ. ಹೋಗುವ ದಾರಿಯಲ್ಲಿ ಕಾರುಗಳಿಗೆ ಮೊಳೆ ಹಾಕುತ್ತಾರೆ. ನಾವು ಹೊರಗೆ ಹೋಗುತ್ತಿದ್ದಾಗ ಸಂಪ್ಗೆ ಹಾವು ಬಿಡುತ್ತಾರೆ. ಒಂದಲ್ಲ ಒಂದು ದಿನ ಸತ್ಯ ಗೊತ್ತಾಗೇ ಗೊತ್ತಾಗತ್ತೆ. ಹೆಸರಘಟ್ಟ ಮಠದ ಸಿಬ್ಬಂದಿ ಎಲ್ಲರಿಗೂ ಸತ್ಯ ಗೊತ್ತು ಆದರೆ ಅವರು ಯಾರು ಬಾಯಿ ಬಿಡಲ್ಲ” ಎಂದು ಅಳಲನ್ನು ತೋಡಿಕೊಂಡಿದ್ದಾರೆ.




