KHARGE ON PETROL AND DIESEL PRICE: ಬಿಜೆಪಿಯ ಅಚ್ಛೇದಿನ್ ಕೇವಲ ಭಾಷಣಗಳಲ್ಲಿ ಮಾತ್ರ: ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಮಾಡದ ಲೂಟಿ ಸರ್ಕಾರ : ಮೋದಿಗೆ ತಿರುಗೇಟು ನೀಡಿದ ಖರ್ಗೆ

ನವದೆಹಲಿ : ಬಿಜೆಪಿ ಮುಖಂಡರು ಹೇಳುವ ಅಚ್ಛೇ ದಿನ್ ಕೇವಲ ಭಾಷಣಗಳಲ್ಲಿ ಹಾಗೂ ಅವರು ನೀಡುವ ಸುಳ್ಳು ಜಾಹೀರಾತುಗಳಲ್ಲಿ ಮಾತ್ರ ಸೀಮಿತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಕೆಯಾಗುತ್ತಿದೆ. ಆದರೆ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾತ್ರ ತೈಲ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ ಎಂದು ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ 19 ವರ್ಷಗಳಲ್ಲಿ ತೈಲ ಬೆಲೆಯು ಶೇಕಡಾ 31 ರಷ್ಟು ಕಡಿಮೆಯಾಗಿದೆ. ಆದರೂ ಕೇಂದ್ರ ಸರ್ಕಾರ ಇಂಧನ ಬೆಲೆಯಲ್ಲಿ ಯಾವುದೇ ಕಡಿತ ಮಾಡಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರವು ಜನರಿಂದ ಹಣ ಲೂಟಿ ಮಾಡುವ ಕೆಲಸದಲ್ಲಿ ತೊಡಗಿದೆ, ಸಂಪುಟ ಸಚಿವರು ತೈಲ ಕಂಪನಿಗಳೊಂದಿಗೆ ಬೆಲೆ ಇಳೆಕೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳುತ್ತಿದ್ದಾರೆ.
ಆದರೆ, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ನಲ್ಲಿ ರೂಪಾಯಿ ಎಂಟರಿಂದ ಹತ್ತು ಹಾಗೂ ಪ್ರತಿ ಲೀಟರ್ ಡೀಸಲ್ ನಲ್ಲಿ ಮೂರರಿಂದ ನಾಲ್ಕು ರೂಪಾಯಿ ಲಾಭ ಗಳಿಸುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ. ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ಕೇಂದ್ರ ಸರ್ಕಾರದ ಲೂಟಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

More News

You cannot copy content of this page