ಕೇಪ್ ಟೌನ್ : ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೊನೆಗೂ ಗೆಲುವಿನೊಂದಿಗೆ ಕೊನೆಗೊಳಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಚಕವಾಗಿದ್ದು, ಕೇವಲ ಎರಡನೇ ದಿನಗಳಲ್ಲಿ ಐದು ದಿನಗಳ ಟೆಸ್ಟ್ ಪಂದ್ಯದ ಫಲಿತಾಂಶ ಬಂದಿದ್ದು, ಭಾರತಕ್ಕೆ ವರದಾನವಾಗಿದೆ.

ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಅಮೋಘ ಏಳು ವಿಕೆಟ್ ಗಳ ಐತಿಹಾಸಿಕ ಜಯ ಸಾಧಿಸಿದ್ದು, ಇದರಿಂದ 31 ವರ್ಷಗಳ ಬರವನ್ನು ನೀಗಿಸಿಕೊಂಡಿದೆ. ಕೇಪ್ ಟೌನ್ ನಲ್ಲಿ 1993ರಿಂದ ಇಲ್ಲಿಯವರೆಗೂ ಒಂದೂ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಈ ಬಾರಿ ಅತಿಥೇಯ ತಂಡವನ್ನು ಸೋಲಿಸಿ ಇತಿಹಾಸ ಬರೆದಿದೆ. ಇದರಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿ ಸಮಬಲ ಕಂಡಿದೆ.

ಈ ಟೆಸ್ಟ್ ಗೂ ಮೊದಲು ನಡೆದ ಮೊದಲ ಟೆಸ್ಟ್ ಪಂದ್ಯ ಸೆಂಚುರಿಯನ್ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಮತ್ತು 32 ರನ್ ಗಳಿಂದ ಗೆಲುವು ಕಂಡಿತ್ತು. ಹೀನಾಯವಾಗಿ ಸೋತ ಭಾರತ ತಂಡ ಎರಡನೇ ಟೆಸ್ಟ್ ನಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದೆ. ಆದರೆ, ಟೆಸ್ಟ್ ಸರಣಿಯನ್ನು ಗೆಲ್ಲುವ ಕನಸು ಮಾತ್ರ ನನಸಾಗಲಿಲ್ಲ.


ಕೇಪ್ ಟೌನ್ ನ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಭಾರತ 153ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 55 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಫಾಲೋಆನ್ ಪಡೆದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ನಲ್ಲಿ 176 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತಕ್ಕೆ 79 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು ವಿರೋಚಿತ ಜಯ ಸಾಧಿಸಿತು.