ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ನಿನ್ನೆ ರಾತ್ರಿ ಮೂವರು ಸಚಿವರ ರಹಸ್ಯ ಭೋಜನ ಕೂಟ ಮೀಟಿಂಗ್ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್, ಸಮಾಜ ಸಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಅವರು ರಾತ್ರಿ ಸಚಿವ ಜಾರಕಿಹೊಳಿ ಅವರ ನಿವಾಸದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಸಮಯ ರಹಸ್ಯ ಸಭೆ ನಡೆಸಿ ಸಮಾಲೋಚನೆ ನಡೆಸಿರುವುದು ಕುತೂಹಲಕ್ಕೆಡೆ ಮಾಡಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಬಂದ ಪರಮೇಶ್ವರ್ ಮತ್ತು ಮಹದೇವಪ್ಪ ಅವರು ನಾಲ್ಕು ಗೋಡೆಗಳ ನಡುವೆ ಮಹತ್ವದ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಲೋಕಸಭೆ ಚುನಾವಣೆ ತಯಾರಿ ಕುರಿತು ನವದೆಹಲಿಗೆ ತೆರಳುತ್ತಿದ್ದಂತೆಯೇ ಇತ್ತ, ಮೂವರು ದಲಿತ ಸಚಿವರು ಒಟ್ಟಾಗಿ ಸಭೆ ನಡೆಸಿದ್ದಾರೆ.

ಬುಧವಾರ ರಾತ್ರಿ ನವದೆಹಲಿಗೆ ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸತೀಶ್ ಜಾರಕಿಹೊಳಿ ಅವರೂ ತೆರಳಿದ್ದು, ಇಬ್ಬರೂ ಒಂದೇ ಕಾರಿನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದರು. ಇಲಾಖೆಗೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಅವರ ಬಳಿ ಚರ್ಚೆ ನಡೆಸಲಾಗಿದೆ ಎಂದು ನಂತರ ವಿಮಾನ ನಿಲ್ದಾಣದಲ್ಲಿ ಸತೀಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.
ಲೋಕಸಭೆ ಚುನಾವಣೆಗೂ ಮೊದಲು ಮೂವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂಬ ಬೇಡಿಕೆಯನ್ನು ಮೂವರು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅವರ ಸಭೆ ಇದೇ ಚರ್ಚೆ ಮತ್ತೆ ಮುನ್ನೆಲೆಗೆ ಬರಲಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ಈ ಮೂವರು ನಾಯಕರು ಪರಮೇಶ್ವರ್ ಅವರ ನಿವಾಸದಲ್ಲಿ ಸಭೆ ಸೇರಿ ಡಿನ್ನರ್ ಮೀಟಿಂಗ್ ಮಾಡಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಂಡಿದ್ದರು.

ಇತದೀಗ ಈ ಮೂವರು ಸಚಿವರ ರಹಸ್ಯ ಸಭೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು, ಮೂವರು ಡಿಸಿಎಂ ಕುರಿತ ಚರ್ಚೆನಾ, ನಿಗಮ ಮಂಡಳಿ ನೇಮಕಾತಿ ಕುರಿತ ಚರ್ಚೆನಾ ಅಥವಾ ಲೋಕಸಭೆ ಚುನಾವಣೆ ಸಂಬಂಧ ಚರ್ಚೆನಾ ಅನ್ನೋದು ಮಾತ್ರ ಇದುವರೆಗೂ ಬಹಿರಂಗವಾಗಿಲ್ಲ.




