PATIENT’S JEWELERY STOLEN: ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯ 72 ಗ್ರಾಂ ಚಿನ್ನಾಭರಣ ಮಂಗಮಾಯ: ಪೊಲೀಸರಿಗೆ ದೂರು

ಬೆಂಗಳೂರು : ಆಸ್ಪತ್ರೆಯ ಚಿಕಿತ್ಸೆಗೆಂದು ಹೋಗಿದ್ದಾಗ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮಂಗಮಾಯವಾದ ಘಟನೆ ಬೆಂಗಳೂರು ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕಿಶೋರ್ ಎಂಬುವವರ ಪತ್ನಿಯ ಚಿನ್ನಾಭರಣ ಕಳ್ಳತನವಾಗಿದೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆಪರೇಷನ್ ಗೆ ಅಂತ ಹೋಗಿದ್ದ ರೋಗಿಯ ಚಿನ್ನಾಭರಣ ಕಳ್ಳತನ ಮಾಡಿರುವುದು ನಿಜವಾಗಿಯೂ ಅಮಾನವೀಯತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಿಶೋರ್ ರವರ ಪತ್ನಿ 6 ತಿಂಗಳ ಗರ್ಭಿಣಿ, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಡಿಸೆಂಬರ್ 24 ನೇ ತಾರೀಖಿನಂದು ಚಿಕಿತ್ಸೆಗಾಗಿ ಬಂದಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. 27 ನೇ ತಾರೀಖಿನಂದು ಆಪರೇಷನ್ ಇದ್ದ ಕಾರಣ 4ನೇ ಫ್ಲೋರ್ ನಲ್ಲಿ ಚಿಕಿತ್ಸೆ ನೀಡಿದ್ದರು.
ಆಗ ಕಿಶೋರ್ ‌ಅವರ ಪತ್ನಿಯ ಬಳಿಯಲ್ಲಿದ್ದ ಚಿನ್ನದ ಒಡವೆಗಳನ್ನು ತೆಗೆದಿದ್ದ ಆಸ್ಪತ್ರೆಯ ಸಿಬ್ಬಂದಿ, ಆಪರೇಷನ್ ಮಾಡುವ ಸಲುವಾಗಿ ಒಡವೆಗಳನ್ನು ತೆಗೆದು ಇಟ್ಟಿದ್ದರು. ಮಂಗಳಸೂತ್ರ, ಚಿನ್ನದ ಚೈನ್, ಚಿನ್ನದ ಗುಂಡುಗಳನ್ನು ತೆಗೆದು ಇಟ್ಟಿದ್ದರು. ಚಿನ್ನಾಭರಣಗಳನ್ನು ಪೆಶೆಂಟ್ ಅಟೆಂಡರ್ ಗೆ ನೀಡಬೇಕಾಗತ್ತೆ. ಪೇಶೆಂಟ್ ಅಟೆಂಡರ್ ಎಂದರೆ ಪೇಶೆಂಟ್ ಕಡೆಯವರಿಗೆ ನೀಡಬೇಕಾಗುತ್ತದೆ.
ಆದ್ರೆ ಆಸ್ಪತ್ರೆಯ ಸಿಬ್ಬಂದಿ ಯಾರಿಗೂ ಸಹ ಚಿನ್ನಾಭರಣ ನೀಡಿರುವುದಿಲ್ಲ. ಆಪರೇಷನ್ ಮುಗಿದು ಹೊರ ಬಂದ ನಂತರ ಚಿನ್ನಾಭರಣ ನೋಡಿದಾಗ ಶಾಕ್ ಆಗಿದ್ದು, ಯಾವುದೇ ಚಿನ್ನಾಭರಣ ಕಿಶೋರ್ ಪತ್ನಿ ಬಳಿ ಇರಲಿಲ್ಲ ಎಂದು ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಗೆ ಕೇಳಿದಾಗ ಗೊತ್ತಿಲ್ಲವೆಂಬ ಉತ್ತರ ನೀಡಿದ್ದಾರೆ. ಒಟ್ಟು 72 ಗ್ರಾಂನ 5 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳುವಾಗಿದೆ ಎಂದು ದೂರಿದ್ದಾರೆ. ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಕಳ್ಳತನ ಮಾಡಿದ್ದಾರೆಂದು ದೂರು ನೀಡಿರುವ ಕಿಶೋರ್ ರಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ದಾಖಲಿಸಿದ್ದಾರೆ.

More News