ಗದಗ: ಪ್ರತಿ ವರ್ಷ ಬರ್ತ್‌ಡೇ ಬಂದಾಗ ಈತರ ಒಂದೊಂದು ಘಟನೆ ನಡೆದಾಗ, ನನಗೆ ಬರ್ತ್‌ಡೇ ಅಂದರೇನೆ ಭಯ ಬಂದು ಬಿಟ್ಟಿದೆ. ನಿಜ ಹೇಳಬೇಕು ಅಂದರೆ, ನನ್ನ ಬಗ್ಗೆ ನನಗೆ ಅಸಹ್ಯ ಆಗಿಬಿಟ್ಟಿದೆ ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಶ್ ಹುಟ್ಟಿದ ಹಬ್ಬದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟಲು ಹೋಗಿ, ಮೂವರು ಯುವಕರು ವಿದ್ಯುತ್ ಸ್ಪರ್ಶದಿಂದ
ಮೃತ ಪಟ್ಟಿದ್ದಾರೆ. ವಿಚಾರ ತಿಳಿಯುತ್ತಿದ್ದಂತೇ ಶೂಟಿಂಗ್ ಮೊಟಕುಗೊಳಿಸಿ, ವಿದೇಶದಿಂದ ಮೃತ ಬಾಲಕರ ಕುಟುಂಬಗಳನ್ನ ಸಾಂತ್ವನ ಮಾಡಲು ಬಂದರು. ಈ ವೇಳೆ ಮಾತನಾಡಿದ ಅವರು, ನಿಜ ಹೇಳುತ್ತೇನೆ ಕೇಳಿ. ಅಭಿಮಾನ ಅಂದ್ರೆ ಅವರು ಎಲ್ಲಿಂದಲೂ ಕೂತು ಪ್ರೀತಿಯಿಂದ ನಮಗೆ ಹರಸಿದರೆ ಸಾಕು. ಅದೇ ನಿಜವಾದ ಬರ್ತ್‌ಡೇ.
ಈ ವರ್ಷ ನಾನು ಬರ್ತ್‌ಡೇ ಮಾಡದೇ ಇರೋದಕ್ಕೆ ಕಾರಣನೇ ನೀವು. 10-15 ದಿನಗಳ ಮುಂಚೆ ಎಲ್ಲಾ ಕೋವಿಡ್ ಅಂತ ಶುರು ಮಾಡಿದ್ರಲ್ಲ. ನಮ್ಮ ಬರ್ತ್‌ಡೇ ಅಂತ ಯಾರಿಗೂ ತೊಂದರೆ ಆಗಬಾರದು. ಯಾರಿಗೂ ಆರೋಗ್ಯ ಹಾಳಾಗಬಾರದು ಎಂದು ಬೇಕಂತಲೇ ಬರ್ತ್‌ಡೇ ಕ್ಯಾನ್ಸಲ್ ಮಾಡಿದ್ದೆ. ಆದ್ರೆ ಪ್ರತಿ ವರ್ಷ ಬರ್ತ್‌ಡೇ ಬಂದಾಗ ಈತರ ಒಂದೊಂದು ಘಟನೆ ನಡೆದಾಗ, ನನಗೆ ಬರ್ತ್‌ಡೇ ಅಂದರೇನೆ ಭಯ ಬಂದು ಬಿಟ್ಟಿದೆ. ನನ್ನ ಬಗ್ಗೆ ನನಗೆ ಅಸಹ್ಯ ಆಗಿಬಿಟ್ಟಿದೆ ಎಂದರು.

ಬರ್ತ್‌ಡೇ ಬೇಡ ಅಂದರೂ, ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಾರೆ. ಮಾಡಿದರೆ ಏನಾದರೂ ಒಂದು ಆಗುತ್ತೆ. ಮನೆಗೆ ಯಾರು ಬೇಕಾದರೂ ಸಹಾಯ ಮಾಡಬಹುದು. ಆದರೆ, ಮನೆಗೆ ಮಗ ಬರುತ್ತಾನಾ? ಮನೆಯಲ್ಲಿ ಮಕ್ಕಳನ್ನು ಕಳ್ಕೊಂಡವರು ಏನು ಹೇಳ್ತಾರೆ? ನಮ್ಮ ಮನೆಯಲ್ಲಿ ಸಾವು ಆದರೂ ಏನು ಹೇಳುವುದಕ್ಕೆ ಸಾಧ್ಯ ಹೇಳಿ? ಏನು ಕೊಟ್ಟರೂ ಮಗ ಬರುತ್ತಾನಾ? ಇನ್ನೂ 20-25 ವರ್ಷದ ಹುಡುಗರು ಎಂದು ನೊಂದರು.

ಈ ಮುಖಾಂತರ ಎಲ್ಲರಿಗೂ ಕೇಳಿ ಕೊಳ್ಳುತ್ತೇನೆ. ಹೀಗೆ ಬ್ಯಾನರ್ ಕಟ್ಟೋದು, ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರೋದು. ಫೋಟೊ ತೆಗೆಯೋದು, ಸೆಲ್ಫಿ ತೆಗೆಯೋದು ಇವನ್ನೆಲ್ಲ ಬಿಟ್ಟು ಬಿಡಿ. ನನ್ನ ಸುತ್ತಮುತ್ತ ಜನ ಇರಬೇಕು ಅಂತ ಬಯಸೋದಿಲ್ಲ. ಬೇಜಾರು ಮಾಡಿಕೊಂಡರೂ ಪರ್ವಾಗಿಲ್ಲ ಅಂತ ನಾನು ಯಾರ ಕೈಗೂ ಸಿಗೋದಿಲ್ಲ.

ಮೃತ ಕುಟುಂಬಕ್ಕೆ ಏನಾದ್ರು ಘೋಷಣೆ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಏನೋ ಒಂದು ಘೋಷಣೆ ಮಾಡೋದು ದೊಡ್ಡ ವಿಷಯ ಅಲ್ಲ. ನಾನು ನಿಜವಾಗಲೂ ಅವರ ಕುಟುಂಬವನ್ನು ಅರ್ಥ ಮಾಡಿಕೊಂಡು. ಅವರಿಗೆ ಏನು ಅವಶ್ಯಕತೆ ಇರುತ್ತೋ? ಅದನ್ನು ಮಾಡೋಣ. ಇವತ್ತು ಅದೆಲ್ಲ ಮಾತಾಡೋ ಸಮಯ ಅಲ್ಲ ಎಂದು ಹೇಳಿ ತೆರಳಿದರು.