ಮತ್ತೊಬ್ಬ ಯಶ್ ಅಭಿಮಾನಿಗೆ ದುರಂತ: ಯಶ್ ನೋಡಲು ಓಡೋಡಿ ಬರ್ತಿದ್ದವನಿಗೆ ಗಂಭೀರ ಆ್ಯಕ್ಸಿಡೆಂಟ್

ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿಬಿಟ್ಟಿದೆ. ಯಶ್ ರನ್ನ ನೋಡಲೇಬೇಕೆಂದು ವೇಗವಾಗಿ ಬರ್ತಿದ್ದ ಯಶ್ ಅಭಿಮಾನಿಯೊಬ್ಬ ಆ್ಯಕ್ಸಿಡೆಂಟ್ ಆಗಿ ಗಂಭೀರ ಸ್ಥಿತಿ ಯಲ್ಲಿದ್ದಾರೆ.

ವಿದ್ಯುತ್ ಅವಘಡದಿಂದ ಮೃತ ಪಟ್ಟ ಕುಟುಂಬ ಹಾಗೂ ಆಸ್ಪತ್ರೆ ಗೆ ದಾಖಲಾದ ಇತರರನ್ನ ಭೇಟಿಯಾಗಿ ಸಾಂತ್ವನ ಹೇಳಲು ನಟ ಯಶ್ ನಿನ್ನೆ ಸಂಜೆ ವಿದೇಶದಿಂದ ಗದಗ ಜಿಲ್ಲೆ ಸೊರಣಗಿ ಗ್ರಾಮಕ್ಕೆ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮತ್ತೊಬ್ಬ ಯಶ್ ಅಭಿಮಾನಿ 22 ವರ್ಷದ ನಿಖಿಲ್ ಗೌಡ ಎಂಬಾತ ಆಸ್ಪತ್ರೆ ಕಡೆಗೆ ದೌಡಾಯಿಸಿದ್ದರು.

ಯಶ್ ನೋಡಲು ರಭಸವಾಗಿ ಹೋಗ್ತಿದ್ದ ನಿಖಿಲ್ ಗೌಡ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗದಗದ ತೇಜಾನಗರದಲ್ಲಿ ನಡೆದಿದೆ. ಅಭಿಮಾನಿ ನಿಖಿಲ್ ಗೌಡ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ ಎನ್ನಲಾಗಿದೆ. ಜೊತೆಗಿದ್ದ ಮತೊಬ್ಬ ಅಭಿಮಾನಿಯನ್ನು ಆಸತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಬೈಕ್‌ ಅಪಘಾತದಿಂದ ನಿಖಿಲ್‌ ಎಂಬ ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸ್‌ ಬೆಂಗಾವಲು ವಾಹನಕ್ಕೆ ಯಶ್‌ ಅಭಿಮಾನಿಯ ಬೈಕ್‌ ಡಿಕ್ಕಿಯಾದ ತಕ್ಷಣ ಪೊಲೀಸ್‌ ವಾಹನದಲ್ಲಿಯೇ ಈತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

More News

You cannot copy content of this page