ಬೆಂಗಳೂರು : ಹೆತ್ತ ತಾಯಿಯೇ ತನ್ನ ನಾಲ್ಕು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದ ಘಟನೆ ಸಂಬಂಧ ಆರೋಪಿ ಸುಚನಾ ಸೇಠ್ ರನ್ನು ಗೋವಾ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತಾನೇ ತನ್ನ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಶವವನ್ನು ತಂದೆಯ ವಶಕ್ಕೆ ನೀಡಲಾಗಿದೆ.
ಗೋವಾದ ಹೋಟೆಲ್ನಲ್ಲಿ ರೂಂ ಬಾಡಿಗೆ ಪಡೆದು ಉಳಿದುಕೊಂಡಿದ್ದ ಸುಚನಾ ಸೇಠ್, ತನ್ನ ನಾಲ್ಕು ವರ್ಷದ ಮಗು ಮಲಗಿರುವಾಗ ದಿಂಬಿನಿಂದ ಉಸಿರುಕಟ್ಟಿಸಿ ಸಾಯಿಸಿದ್ದಾಳೆ. ಈಕೆಯ ಬಂಧನದ ಬಳಿಕ ಚಿತ್ರದುರ್ಗದಿಂದ ಕರೆದುಕೊಂಡು ಹೋದ ಪೊಲೀಸರು ನಿನ್ನೆ ಗೋವಾದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಆರು ದಿನಗಳ ಕಾಲ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ವಿಚಾರಣೆ ವೇಳೆ ಆರೋಪಿ ಸುಚನಾ ಸೇಠ್ ಸಮರ್ಪಕವಾದ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎನ್ನಲಾಗಿದೆ.
2010 ರಲ್ಲಿ ಸುಚನಾ ಸೇಠ್ ವೆಂಕಟರಮಣರೊಂದಿಗೆ ವಿವಾಹವಾಗಿದ್ದರು. 2019ರಲ್ಲಿ ಗಂಡು ಮಗು ಜನಿಸಿತ್ತು. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಬಾರದ ಹಿನ್ನಲೆ 2022 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಈ ವೇಳೆ ನ್ಯಾಯಾಲಯ ಪ್ರತಿ ರವಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ೪ ರವೆಗೆ ತಂದೆಗೆ ಮಗುನನ್ನು ಭೇಟಿ ಮಾಡುವ ಅವಕಾಶ ನೀಡಿತ್ತು. ಇದರಂತೆ ಸುಚನಾ ಪತಿ ತನ್ನ ಮಗುವನ್ನು ಭೇಟಿಯಾಗಿ ಸಮಯ ಕಳೆಯುತ್ತಿದ್ದರು ಎನ್ನಲಾಗಿದೆ.

ಆದರೆ, ತಾನು ಹೆತ್ತ ಮಗುವನ್ನು ತಾನೇ ಕೊಲ್ಲುವಂಥ ನಿರ್ಧಾರಕ್ಕೆ ಸುಚನಾ ಯಾಕೆ ಬಂದರು? ಮಗನನ್ನು ಪತಿ ಭೇಟಿ ಮಾಡುವುದು ಆಕೆಗೆ ಇಷ್ಟವಿರಲಿಲ್ವೇ? ವಿಚ್ಛೇದನ ಬಳಿಕ ಆಕೆ ಡಿಪ್ರೆಶನ್ ಗೆ ಒಳಗಾಗಿದ್ದರಾ? ಗೋವಾದಿಂದ ಮಗುವಿನ ಶವವನ್ನು ಬೆಂಗಳೂರಿಗೆ ಯಾಕೆ ರವಾನಿಸುತ್ತಿದ್ದಳು ಎಂಬ ಹಲವು ಪ್ರಶ್ನೆಗಳಿಗೆ ವಿಚಾರಣೆಯಲ್ಲಿ ಉತ್ತರ ಸಿಗಬೇಕಿದೆ.
ಸುಚನಾ ಸೇಠ್ ಪತಿ ವೆಂಕಟರಮಣ ತನ್ನ ಮಗುವನ್ನು ಕಳೆದುಕೊಂಡ ಶಾಕ್ ನಲ್ಲಿದ್ದು, ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ಪೊಲೀಸರು ಸ್ಥಳ ಮಹಜರು ನಡೆಸಲು ಸಿದ್ಧತೆ ನಡೆಸುತ್ತಿದ್ದು, ಪ್ರಕರಣ ಭೇದಿಸಲು ಆರೋಪಿಯ ಮೊಬೈಲ್ ಲೊಕೇಷನ್ ಸೇರಿದಂತೆ ಪ್ರತಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ತನಿಖೆಯಿಂದ ಕೊಲೆ ರಹಸ್ಯ ಹೊರಬೀಳಬೇಕಿದೆ.




