ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಒಳ ರಾಜಕೀಯ ಬೇರುಬಿಟ್ಟಿದ್ದು, ಸ್ಥಾನಮಾನಕ್ಕಾಗಿ ಕಿತ್ತಾಟದೊಂದಿಗೆ ಓಲೈಕೆಯೂ ಶುರುವಾಗಿದೆ. ಒಂದೆಡೆ ಕಾಂಗ್ರೆಸ್ ನತ್ತ ಒಲವಿರುವವರನ್ನು ಕರೆದುಕೊಂಡು ಬರುವ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಆಪ್ತರ ನಡವಳಿಕೆಗಳು ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿವೆ.
ಲೋಕಸಭಾ ಚುನಾವಣಾ ಕಣದಲ್ಲಿ ಬಿಜೆಪಿ ಹಾಗು ಜೆಡಿಎಸ್ ಮೈತ್ರಿಯೊಂದಿಗೆ ಯುದ್ಧಕ್ಕಿಳಿಯಲು ಸನ್ನದ್ಧವಾಗಿವೆ. ಆದರೆ ಆಡಳಿತಾರೂಢ ಕಾಂಗ್ರೆಸ್ ನಲ್ಲೇ ಅಧಿಕಾರಕ್ಕೆ ಕಿತ್ತಾಟ ನಡೆಯುತ್ತಿರುವುದು ಮೈತ್ರಿ ಪಕ್ಷಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ತಮ್ಮ ಅಸಮಾಧಾನ ತೋಡಿಕೊಂಡಿದ್ದು, ಅಧಿಕಾರ ಹಂಚಿಕೆಯ ತೂಗುಕತ್ತಿಯನ್ನು ಬೀಸಿದ್ದಾರೆ. ಅಲ್ಲದೇ ಸುರ್ಜೇವಾಲ ಮುಂದೆ ಡಿಸಿಎಂ ಶಿವಕುಮಾರ್ ನಡೆಗೆ ದಲಿತ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಬರದಂತಾಗಿದೆ. ಕಾರ್ಯಕರ್ತರಿಗೆ ಸರಿಯಾಗಿ ಡಿಕೆ ಶಿವಕುಮಾರ್ ಸ್ಪಂಧಿಸುತ್ತಿಲ್ಲ. ಚುಣಾವಣೆಯಲ್ಲಿ ಆಯಾ ಸಮುದಾಯಗಳ ವಿಶ್ವಾಸ ಗಳಿಸಬೇಕಾದರೆ ಇತರ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮೂರು ಡಿಸಿಎಂ ಹುದ್ದೆ ನೀಡಬೇಕು. ಇತರೆ ಇಲಾಖೆಗಳಲ್ಲಿ ಡಿಕೆಶಿ ಮೂಗು ತೂರಿಸುತ್ತಿದ್ದಾರೆ ಎಂಬ ದೂರುಗಳ ಸುರಿಮಳೆಯನ್ನು ಸಭೆಯಲ್ಲಿ ಸಿಎಂ ಆಪ್ತರು ನೀಡಿದ್ದಾರೆ.
ಸಚಿವ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಕೆ. ಎಚ್ .ಮುನಿಯಪ್ಪ, ಎಚ್ ಸಿ ಮಹದೇವಪ್ಪ ಅವರು ಡಿಸಿಎಂ ಹುದ್ದೆ ರಚನೆಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಹಾಗೇ ಸರ್ಕಾರ ಬಂದಾಗಿನಿಂದ ಯಾವ ಕಾರ್ಯಚಟುವಟಿಕೆ ನಡೆದಿಲ್ಲ. ಸಮಸ್ಯೆ ಹೇಳಿಕೊಳ್ಳಲು ಪಕ್ಷದ ಕಾರ್ಯಕರ್ತರು ನಮ್ಮ ಬಳಿ ಬರ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್ ಸುರ್ಜೇವಾಲ ಬಳಿ ಡಿಕೆ ಶಿವಕುಮಾರ್ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸಿಎಂ ಆಪ್ತರು ಮೂವರು ಡಿಸಿಎಂ ಸ್ಥಾನದ ಬೇಡಿಕೆ ಇಡುವ ಮೂಲಕ ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನದಲ್ಲಿದ್ದಾರೆ. ಜತೆಗೆ ಕೆಪಿಸಿಸಿ ಘಟಕದ ಅಧ್ಯಕ್ಷರಾಗಿಯೂ ಮುಂದುವರಿದಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು. ಇಲ್ಲದಿದ್ದರೆ ಕಾರ್ಯಾಧ್ಯಕ್ಷರ ಬದಲಾವಣೆಯೂ ಬೇಡ. ಕೆಪಿಸಿಸಿ ಅಧ್ಯಕ್ಷರಿಗೂ 2 ಪ್ರಬಲ ಖಾತೆ, ಅವರ ಕಾರ್ಯಭಾರ ಆಗಿಲ್ಲ. ಹೀಗಾಗಿ ನಾವೂ ಕಾರ್ಯಾಧ್ಯಕ್ಷರಾಗಿ ಮುಂದುವರಿಯುತ್ತೇವೆ ಎಂದು ಸಿಎಂ ಆಪ್ತರು ಸಭೆಯಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಲಿತ ಸಚಿವರ ಡಿಸಿಎಂ ಸ್ಥಾನ ಬೇಡಿಕೆಯಿಂದಾಗಿ ಸುರ್ಜೇವಾಲಾ ಇಕ್ಕಟ್ಟಿಗೆ ಸಿಲುಕಿದ್ದಾರಂತೆ. ಉಸ್ತವಾರಿ ನೇತೃತ್ವದ ಸಭೆಯಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಯಿಂದ ಆ ಸಮುದಾಯಗಳ ವಿಶ್ವಾಸ ಗೆಲ್ಲಬಹುದೆಂದು ಸತೀಶ್ ಜಾರಕಿಹೊಳಿ ಹೇಳಿದ್ದರೆ, ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಲೇಬೇಕು ಎಂದು ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಎರಡು ಖಾತೆಗಳಿದ್ದರೂ ಅನಗತ್ಯವಾಗಿ ಬೇರೆ ಇಲಾಖೆಗಳಲ್ಲಿ ಡಿಕೆ ಶಿವಕುಮಾರ್ ಮೂಗು ತೂರಿಸುತ್ತಿದ್ದಾರೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ತಮ್ಮ ಬೇಸರವನ್ನು ಹೊರ ಹಾಕಿದ್ದಾರಂತೆ ಎನ್ನಲಾಗಿದೆ.
ಉಸ್ತುವಾರಿ ಸಚಿವರು ವಾರಕ್ಕೆ ಒಮ್ಮೆಯಾದ್ರು ಜಿಲ್ಲೆಗಳಲ್ಲಿ ಉಳಿದುಕೊಂಡು ಜನರ, ಕಾರ್ಯಕರ್ತರ ಅಹವಾಲಿಗೆ ಸ್ಪಂದಿಸಬೇಕು. ಚುನಾವಣೆಗೂ ಮುನ್ನ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ಹಂಚಿಕೆ ಮಾಡಬೇಕು ವಿಚಾರ ಸೇರಿದಂತೆ ಹಲವು ಮಹತ್ವದ ಸಂಗತಿಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ಜನವರಿ 11 ರಂದು ದೆಹಲಿಗೆ ಬಂದರೆ ನಿಮ್ಮ ಬೇಡಿಕೆಗಳನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗುವುದು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಜೊತೆ ಚರ್ಚಿಸೋಣ. ಆದರೆ ಯಾರೂ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ರಣದೀಪ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಏನೂ ಆಗಲ್ಲ. ಯಾರೂ, ಯಾರ ಖಾತೆ ಕಿತ್ತುಕೊಳ್ಳಲ್ಲ ಎಂದು ತುಮಕೂರಲ್ಲಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಮುದ್ದುಹನುಮೇಗೌಡ ಅವರು ಬೆಳಿಗ್ಗೆ ನನ್ನ ಭೇಟಿಯಾಗಿದ್ದಾರೆ. ಚುಣಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರಲು ಪ್ರಯತ್ನ ಮಾಡ್ತಿದ್ದೇನೆ. ಈಗಲೇ ಅವರು ಅಭ್ಯರ್ಥಿ ಎಂದು ಹೇಳಕ್ಕಾಗುವುದಿಲ್ಲ ಎಂದೂ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.ಈ ಮಧ್ಯೆ ಸುರ್ಜೇವಾಲಗೆ ತಮ್ಮ ವಿರುದ್ಧ ದೂರು ನೀಡಿದ ಕೆ.ಎನ್ ರಾಜಣ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷರ ಕಚೇರಿಗೆ ಕರೆಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಗುಪ್ತ ಮಾತುಕತೆ ನಡೆಸುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ.