COVID TEST COMPULSORY: ಹೈ ರಿಸ್ಕ್ ರೋಗಲಕ್ಷಣ ಇರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಕೋವಿಡ್ ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಎರಡನೇ ಬಾರಿ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿತ್ತು. ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ ಮಹದೇವಪ್ಪ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗ್ತಿದೆ ಎಂದರು. ಕೋವಿಡ್ ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸುವುದಾಗಿ ಹೇಳಿದರು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ ಕೆಲಸವನ್ನ ಸರ್ಕಾರ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿಯೇ ಟೆಸ್ಟಿಂಗ್ ನಡೆಸಿ, ಅಗತ್ಯ ಚಿಕಿತ್ಸೆ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಸ್ತುತ ಐ.ಸಿ.ಯು ನಲ್ಲಿ 19 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವರ ಮೇಲೆ ಹೆಚ್ವಿನ ನಿಗಾ ಇಡಲು ಸೂಚಿಸಲಾಗಿದೆ. ಅಲ್ಲದೇ ಕೋವಿಡ್ ಪಾಸಿಟಿವ್ ಬಂದವರ ಸಂಪರ್ಕದಲ್ಲಿದ್ದವರಲ್ಲಿ ಹೈ ರಿಸ್ಕ್ ರೋಗಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಮಾಡುವಂತೆ ತಿಳಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದವರಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಡೆತ್ ಆಡಿಟ್ ಮಾಡಲು ಸೂಚಿಸಲಾಗಿತ್ತು. 26 ಪ್ರಕರಣಗಳಲ್ಲಿ 21 ಜನರ ಡೆತ್ ಆಡಿಟ್ ನಡೆಸಲಾಗಿದ್ದು, ನೈಜವಾಗಿ ಕೋವಿಡ್ ಕಾರಣದಿಂದ 2 ಮಾತ್ರ ಸಾವಿಗಿಡಾಗಿದ್ದಾರೆ. ಉಳಿದವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಆದರೆ ಇವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಜನರು ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

More News

You cannot copy content of this page