ಇತ್ತೀಚೆಗೆ ಪಬ್ ಒಂದರಲ್ಲಿ ನಿಯಮ ಮೀರಿ ನಡೆಸಿದ ಪಾರ್ಟಿ ಸಂಬಂಧ ಸ್ಯಾಂಡಲ್ವುಡ್ ಸ್ಟಾರ್ ನಟರು ಇಂದು ಪೊಲೀಸರಿಂದ ವಿಚಾರಣೆ ಎದುರಿಸಲಿದ್ದಾರೆ.
ಬೆಂಗಳೂರಿನ ಪಬ್ ಒಂದರಲ್ಲಿ ಸ್ಟಾರ್ ನಟ ಹಾಗು ಆತನ ಆತ್ಮೀಯರೆಲ್ಲ ಸಿನಿಮಾ ಯಶಸ್ಸಿನ ಗುಂಗಲ್ಲಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಕುರಿತು ಪೊಲೀಸರು ನೋಟೀಸ್ ಸಹ ನೀಡಿದ್ದರು.
ನೋಟಿಸ್ ಪಡೆದ ಎಲ್ಲರೂ ಇಂದು (ಡಿಸೆಂಬರ್ 12) ಮಧ್ಯಾಹ್ನ 2.30ಕ್ಕೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳಲಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ‘ಕಾಟೇರ’ ಸಿನಿಮಾ ಸಕ್ಸಸ್ ಮೀಟ್ ಬಳಿಕ ಇಡೀ ತಂಡ ಸ್ಟಾರ್ ನಟನ ಸ್ನೇಹಿತನ ಪಬ್ ನಲ್ಲಿ ಪಾರ್ಟಿ ಮಾಡಿತ್ತು. ಇದರ ಜೊತೆ ಅನೇಕ ಸೆಲೆಬ್ರಿಟಿಗಳು ಸೇರಿಕೊಂಡಿದ್ದರು.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ನಲ್ಲಿ ಮುಂಜಾನೆವರೆಗೆ ಪಾರ್ಟಿ ನಡೆದಿತ್ತು. ಈ ಆರೋಪದ ಮೇಲೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ದರ್ಶನ್, ರಾಕ್ಲೈನ್ ವೆಂಕಟೇಶ್ ಸೇರಿ ಕೆಲವು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಅಲ್ಲದೇ ಸೆಲೆಬ್ರಿಟಿಗಳು ಬರುತ್ತಿರುವುದರಿಂದ ಠಾಣೆಯ ಎದುರು ಅಭಿಮಾನಿಗಳು ಸೇರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಪ್ರಕರಣ ಏನು?
ಕಳೆದ ವರ್ಷಾಂತ್ಯಕ್ಕೆ ‘ಕಾಟೇರ’ ಚಿತ್ರ ಬಿಡುಗಡೆಗೊಂಡು ಯಶಸ್ಸು ಕಂಡಿದೆ. ಈ ಸಿನಿಮಾ ಸಕ್ಸಸ್ ಸೆಲೆಬ್ರೇಷನ್ ಬಳಿಕ ನಟರಾದ ದರ್ಶನ್, ಧನಂಜಯ್, ಅಭಿಷೇಕ್ ಅಂಬರೀಷ್ ಸೇರಿ ಅನೇಕರು ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ನಿಯಮದ ಪ್ರಕಾರ ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಮಾಡಬಹುದು. ಆದರೆ, ನಿಯಮವನ್ನು ಮೀರಿ ಪಾರ್ಟಿ ನಡೆಸಲಾಗಿತ್ತು.
ಈ ಪಾರ್ಟಿಯಲ್ಲಿ ‘ಕಾಟೇರ’ ಚಿತ್ರತಂಡದ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗು ದರ್ಶನ್ ಆಪ್ತರಾದ ಅಭಿಷೇಕ್ ಅಂಬರೀಷ್, ಡಾಲಿ ಧನಂಜಯ್, ನಟ ಚಿಕ್ಕಣ್ಣ, ನಿನಾಸಂ ಸತೀಶ್ ಕೂಡ ಪಾರ್ಟಿಯಲ್ಲಿದ್ದರು. ಸದ್ಯ ಇವರೆಲ್ಲರಿಗೂ ನೋಟಿಸ್ ನೀಡಲಾಗಿದ್ದು, ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.




