ಬಿಟ್ ಕಾಯಿನ್ ಹಗರಣ: ಎಷ್ಟೇ ಪ್ರಭಾವಿಗಳಿದ್ದರೂ ಬಲಿ ಹಾಕುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಕೂಡ ಭಾಗಿಯಾಗಿದ್ದರೂ ಕೂಡ ಅವರನ್ನು ತಕ್ಷವೇ ಬಲಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ಅವರ 132 ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ನೆಹರು ಪುತ್ತಳಿಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಶಾಮೀಲಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರನ್ನು ಸುಖಾಸುಮ್ಮನೆ ಬಿಡುವುದಿಲ್ಲ, ಬಲಿ ಹಾಕಲಾಗುವುದು ಎಂದು ತಿಳಿಸಿದರು.


ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಮುಲಾಜಿಲ್ಲದೆ ಕ್ರಮಜರುಗಿಸಲಾಗುವುದು. ನಮ್ಮ ಸರ್ಕಾರ ಈ ವಿಚಾರದಲ್ಲಿ ಬಹಳ ಮುಕ್ತವಾಗಿದೆ. ಈ ಪ್ರಕರಣವನ್ನು ಬಯಲಿಗೆಳೆದವರೇ ನಾವು. ತನಿಖೆ ಮಾಡಿದ್ದು, ಇ.ಡಿ ಮತ್ತು ಸಿಬಿಐ ಗೆ ಶಿಫಾರಸ್ಸು ಮಾಡಿದ್ದು ನಮ್ಮ ಸರ್ಕಾರ. ಇ.ಡಿಯಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ಇಂಟರ್ ಪೋಲ್ ಗೂ ಸಹ ವಹಿಸಲಾಗಿದೆ. ಅವರು ಕೋರಿದ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆ ಎಂದರು.

ಮುಲಾಜಿಲ್ಲದೆ ಕ್ರಮ

ಈ ಪ್ರಕರಣದಲ್ಲಿ ರಾಷ್ಟ್ರಕ್ಕೆ, ರಾಜ್ಯಕ್ಕೆ ಹಾಗೂ ವ್ಯಕ್ತಿಗಳಿಗೆ ಮೋಸವಾಗಿದ್ದರೆ, ಮೋಸಮಾಡಿದವರ ಮೇಲೆ ಮುಖಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 2016 ರಿಂದ ಪ್ರಕರಣಕ್ಕೆ ಕರ್ನಾಟಕದೊಂದಿಗೆ ಸಂಬಂಧ ಇರುವುದಾದರೆ ಅವರ ಸರ್ಕಾರ ತನಿಖೆ ಏಕೆ ಕೈಗೊಳ್ಳಲಿಲ್ಲ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾಕೆ ಗಮನ ಹರಿಸಲಿಲ್ಲ. ಆರೋಪಿ ಶ್ರೀ ಕೃಷ್ಣನನ್ನು ಬಂಧಿಸಿ, ಬಿಟ್ಟು ಕಳುಹಿಸಲಾಯಿತು. ನಿರೀಕ್ಷಣಾ ಜಾಮೀನು ಪಡೆದಾಗಲೂ ವಿಚಾರಣೆಗೆ ಅವಕಾಶವಿತ್ತು. ಮುಕ್ತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬಿಟ್ಟು ನಮ್ಮನ್ನು ಎಕೆ ಪ್ರಶ್ನಿಸುತ್ತಿದ್ದಾರೆ ಎಂದು ಕೇಳಿದ ಅವರು, ಆರೋಪಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.

ಆದ್ದರಿಂದ, ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಸಾಕ್ಷ್ಯಾಧಾರಗಳನ್ನು ತನಿಖೆ ಮಾಡುತ್ತಿರುವ ಇಡಿ ಗೆ ಒದಗಿಸಲಿ ಕೂಡಲೇ ಕ್ರಮ ಎಂದರು.

ಚಿಂತನೆಯ ದಿವಾಳಿತನ
ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದರೆ ಅದು ಸುರ್ಜೆವಾಲಾ ಅವರ ಚಿಂತನೆಯ ದಿವಾಳಿತನ ಎಂದರು. ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರಿಗೆ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುವುದು ಶೋಭಿಸುವುದಿಲ್ಲ. ಸಾಂದರ್ಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದರು.

ದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗಿ

ತಿರುಪತಿಯಲ್ಲಿ ನಡೆಯಲಿರುವ ದಕ್ಷಿಣಭಾರತ ಸಿಎಂಗಳ ಸಭೆಯಲ್ಲಿ ಭಾಗಿಯಾಗಲು ತೆರಳುವುದಾಗಿ ಮುಖ್ಯಮಂತ್ರಿ ತಿಳಿಸಿದರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗಾಗಲೇ ಅವರು ಪೂರ್ವ, ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಿದ್ದಾರೆ. ಇದರಲ್ಲಿ ಅಂತರರಾಜ್ಯ ವಿಚಾರಗಳನ್ನು ಚರ್ಚಿಸಲಾಗುವುದು, ನೀರಾವರಿ, ರೈಲ್ವೆ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಮೇಕೆದಾಟು ವಿಚಾರ ಇಲ್ಲಿ ಚರ್ಚೆಗೆ ಬರುವುದು ಅನುಮಾನ ಎಂದು ವಿವರಿಸಿದ ಅವರು, ನ್ಯಾಯಾಲಯದಲ್ಲಿ ನೆರೆ ರಾಜ್ಯದ ವಿಚಾರಗಳು ಇರುವುದರಿಂದ ಅವುಗಳನ್ನು ಚರ್ಚಿಸುವುದು ಅನುಮಾನ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಉಪಸ್ಥಿತರಿದ್ದರು.

More News