CONTRILS TRAFFIC THROUGH ARTIFICIAL INTELLIGENCE (AI): ದೇಶದಲ್ಲೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಯ “ಬೆಂಗಳೂರು ಟ್ರಾಫಿಕ್ ಇಂಜಿನ್”ಗೆ ಚಾಲನೆ

ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಳಕೆ ಮೂಲಕ ಟ್ರಾಫಿಕ್ ನಿಯಂತ್ರಿಸುವ “ಬೆಂಗಳೂರು ಟ್ರಾಫಿಕ್ ಇಂಜಿನ್”ಗೆ ಚಾಲನೆ ನೀಡಲಾಯಿತು.

ನಗರದ ಕಂಠೀರವ ಸ್ಟೇಡಿಯಂನಲ್ಲಿ ನಡೆದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಈ ತಂತ್ರಜ್ಞಾನವು ತುರ್ತುಸೇವೆ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಅದೇ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆಯ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಅಗತ್ಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ದೇಶದಲ್ಲಿನ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತೀರ ಕಡಿಮೆಯಾಗಿದೆ. ಕಮಾಂಡ್ ಸೆಂಟರ್‌ನಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ‌ ಮೂಲಕ ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲಾಗುತ್ತಿದೆ. ಜನರು ಮತ್ತಷ್ಟು ಸುರಕ್ಷಿತವಾಗಿ ಸಂಚರಿಸುವ ದೃಷ್ಟಿಯಿಂದ ತಂತ್ರಜ್ಞಾನ ಬಳಸಲಾಗುವುದು ಎಂದರು.

ವಾಹನ ಚಾಲನೆ ವೇಳೆ ನಮ್ಮ ಸುರಕ್ಷತೆಯ ಜೊತೆಗೆ ಬೇರೆಯವರ ಪ್ರಾಣ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ವಾಹನಗಳಿವೆ. 2023ರಲ್ಲಿ 900 ಜನ ರಸ್ತೆ ಅಪಘಾತದಲ್ಲಿ ಪ್ರಾಣ‌ ಕಳೆದುಕೊಂಡಿದ್ದಾರೆ. ಇದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಜನರಿಗೆ ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

More News