ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರವು ಸ್ವಾಭಿಮಾನದ ಪ್ರತೀಕ ಎಂದು ಶಾಸಕ ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು.
ಮಲ್ಲೇಶ್ವರದ 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲ ಬಿಜೆಪಿ ಕಾರ್ಯಕರ್ತರು, ರಾಮಭಕ್ತರು ಎಲ್ಲ ದೇಗುಲಗಳು, ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ ಎಂದರು.
ಅಯೋಧ್ಯೆ ಶ್ರೀರಾಮಮಂದಿರ ಪುನರ್ ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಹಬ್ಬದ ವಾತಾರವಣ ಇದೆ ಎಂದು ತಿಳಿಸಿದರು.

500 ವರ್ಷಗಳ ಕಾಲ ನಾವು ಅನ್ಯಾಯಕ್ಕೆ ಒಳಗಾಗಿದ್ದೆವು. ಎಲ್ಲ ಭಾರತೀಯರು ಈ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಇತರ ಪಕ್ಷಗಳು ತಮ್ಮ ಕಾರ್ಯಕ್ರಮಗಳನ್ನು ಜನವರಿ 22ರ ಬಳಿಕ ಮಾಡಿದ್ದರೆ ಚೆನ್ನಾಗಿತ್ತು. ಇದಕ್ಕೆ ಜನತೆ ಸೂಕ್ತ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಭಾಷೆ ಮೇಲೆ ಹಿಡಿತ ಇರಬೇಕು. ಸಮಾಧಾನದಿಂದ ಎಲ್ಲರಿಗೂ ಗೌರವ ನೀಡುವುದು ನಮ್ಮ ಸಂಸ್ಕತಿ ಆಗಿರಬೇಕು. ತಪ್ಪಾದಾಗ ಅದನ್ನು ಸರಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಮೊದಲು ಏಕವಚನ ಬಳಕೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ತಮ್ಮ ಮೇಲೆ ಕೇಸು ಹಾಕಿಸಿ ನಂತರ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಕೇಸು ಹಾಕಲು ಹೇಳಬೇಕು ಎಂದು ಇದೇವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.




