ಶಿರಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿದ್ದು ಸರಿಯಾಗಿದ್ದರೆ ನಾನು ಮಾತನಾಡಿದ್ದು ಕೂಡ ಸರಿಯಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಸಂಸ್ಕೃತಿ ಬಗ್ಗೆ ಮುಖ್ಯಮಂತ್ರಿ ಅವರು ನನ್ನ ಎದುರು ಬಂದು ಮಾತನಾಡಲಿ, ಇದೆಲ್ಲದರ ಬಗ್ಗೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಅದೇ ರೀತಿಯಲ್ಲಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು ಸಿದ್ದರಾಮಯ್ಯ ಅವರು ಎಂದು ಹೇಳಿದ ಅವರು ದೇವಸ್ಥಾನವನ್ನು ಮಧ್ಯೆ ತಂದಿದ್ದಾರೆ. ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು ಸಿದ್ದರಾಮಯ್ಯನವರು ಎಂದು ಹೇಳಿ ಮತ್ತೆ ತಮ್ಮ ಹೇಳಿಕೆಗೆ ಧರ್ಮದ ಲೇಪನ ಮಾಡಿದ್ದಾರೆ.
ರಾಮಮಂದಿರದ ವಿಷಯದಲ್ಲಿ ಸಿಎಂ ಹೇಗೆ ವರ್ತಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.ಯಾರಿಗೆ ಯಾವ ಭಾಷೆಯಲ್ಲಿ ಮಾತನಾಡಬೇಕು ಹಾಗೆ ಮಾತನಾಡಿದ್ದೇನೆ ಎಂದು ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡರು. ಯಾರು ನನ್ನ ಒಪ್ಪುತ್ತಾರೋ ಬಿಡುತ್ತಾರೋ ಹಿಂದೂ ಸಮಾಜ ನನ್ನನ್ನು ಒಪ್ಪಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ಖುರ್ಷಿದ್ ಅವರು ಮೋದಿಯವರನ್ನು ಕಪ್ಪೆ, ಮಂಗ, ನಪಸುಂಕ ಎಂದು ಕರೆದರು. ಶರದ್ ಪವಾರ್ ಹಿಟ್ಲರ್ ಎಂದರು. ದಿಗ್ವಿಜಯ ಸಿಂಗ್ ರಾವಣ ಎಂದು ಕರೆದರು, ಸಿದ್ದರಾಮಯ್ಯ ಅವರು ಮಾಸ್ ಮರ್ಡರರ್ ಎಂದು ಕರೆದರು, ಜಯರಾಂ ರಮೇಶ್ ಅವರು ಭಸ್ಮಾಸುರ ಎಂದರು, ಇನ್ನೂ ಏನೇನು ಹೇಳಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.




