ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆಗೆ ಮುನ್ನಾ ನನ್ನ ಜೊತೆ ಚರ್ಚೆಗೆ ಬನ್ನಿ, ಆ ಚರ್ಚೆಯಲ್ಲಿ ನೀವು ಗೆದ್ದರೆ ನಾನೇ ಸಿದ್ದರಾಮಯ್ಯ ಅವರ ಬಳಿ ಕರೆದೊಯ್ಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಂಸದ ಅನಂತ ಕುಮಾರ್ ಹೆಗಡೆಗೆ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ ಬಗ್ಗೆ ಸಂಸದರು ಮಾತನಾಡಿದ್ದಾರೆ, ಕಳೆದ ವರ್ಷ ಪ್ರಧಾನಿ ಮೋದಿ ಅವರು ಅಂಕೋಲಾಗೆ ಬಂದಾಗ ಕನಿಷ್ಠ ಅವರಿಗೆ ಸ್ವಾಗತ ಮಾಡಲಿಲ್ಲ, ಇದೇನಾ ನೀವು ನಿಮ್ಮ ನಾಯಕನಿಗೆ ಕೊಡೋ ಗೌರವ, ಇದೇನಾ ನಿಮ್ಮ ಸಂಸ್ಕ್ರತಿ ಎಂದು ವ್ಯಂಗ್ಯವಾಡಿದ್ದಾರೆ.

ನಾವು ಗೌರವ ಕೊಡ್ತಾ ಇದ್ದೇವೆ ಅಂದ್ರೆ, ಅದರ ಅರ್ಥ ನೀವು ಆ ಗೌರವಕ್ಕೆ ಅರ್ಹರು ಅಂತ ಅಲ್ಲ, ಬನ್ನಿ ಬಹಿರಂಗ ಚರ್ಚೆಗೆ ನಾನೇ ಶಿರಸಿಗೆ ಬರಲಾ, ನೀವೇ ಬೆಂಗಳೂರಿಗೆ ಬರ್ತೀರಾ ಎಂದು ಶಾಸಕರು ಸಂಸದರಿಗೆ ಸವಾಲ್ ಹಾಕಿದರು.
ನಾನು ಪಕ್ಷದ ಕಾರ್ಯಕರ್ತರು ಹಿರಿಯರಿದ್ದಾರೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಲಿದ್ದಾರೆ ಎಂಬ ಅವರ ಪುತ್ರ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದ ಕಾರ್ಯಕರ್ತ ಅದರ ಬಗ್ಗೆ ಹಿರಿಯರು ಮಾತನಾಡುತ್ತಾರೆ.
ನಾನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮುದ್ದಿನ ಹುಡುಗ, ಇಬ್ಬರು ನನ್ನ ರಾಜಕೀಯ ಜೀವನದ ಎರಡು ಕಣ್ಣಗಳು, ನಮ್ಮ ಡಿಕೆ ಸಾಹೇಬ್ರು ಬಗ್ಗೆ ಯಾರೇ ಮಾತನಾಡಿದ್ರೂ ಸುಮ್ಮನಿರಲ್ಲ, ನಮಗೆ ಗೌರವ ಪ್ರತಿಷ್ಠೆ ಇರುತ್ತೆ ಅಲ್ವಾ ಎಂದು ಪ್ರಶ್ನಿಸಿದರು.
ನಿಗಮ ಮಂಡಳಿಯಲ್ಲಿ ಸ್ಥಾನ ವಿಚಾರವಾಗಿ ಮಾತನಾಡಿದ ಅವರು, ಖಂಡಿತವಾಗಿಯೂ ಇಲ್ಲ, ಪಕ್ಷದಲ್ಲಿ ಹಿರಿಯರಿದ್ದಾರೆ, ಅವರಿಗೆಲ್ಲಾ ಆಲ್ ದಿ ಬೆಸ್ಟ್ ಹೇಳ್ತೇನೆ ಎಂದರು.