ಅಸ್ಸಾಂ : ಜ. 23: ಹಲವು ದಶಕಗಳ ಕಾಲ ಭಾರತೀಯರು ಕಾದು ಕುಳಿತಿದ್ದ ರಾಮ ಮಂದಿರ (Ram Mandir) ಉದ್ಘಾಟನೆಯಾಗಿದೆ.. ಸ್ವತಃ ಪ್ರಧಾನ ಮಂತ್ರಿ ಮೋದಿ ಅವರೇವಿಧಿ ವಿಧಾನಗಳ ಮೂಲಕ ಬಾಲರಾಮನ ಪ್ರಾಣ ಪ್ರತಿಷ್ಠಾನ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ಗಣ್ಯರು, ಸಿನಿಮಾ ನಟರು, ಕ್ರೀಡಾ ದಿಗ್ಗಜರು ವಿವಿಧ ಕ್ಷೇತ್ರಗಳ ಸಾಧಕರು ಕೂಡ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದೊಂದು ಪಕ್ಷ ಮತ್ತು ಸಂಘಟನೆ ಕಾರ್ಯಕ್ರಮವಾಗಿರುವುದರಿಂದ ನಾವು ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿಕೆ ಮಾಡಿ ಆಹ್ವಾನವನ್ನು ತಿರಸ್ಕರಿಸಿತ್ತು. ಇದೀಗ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ರಾಮ ಮಂದಿರದ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡಿದ್ದರು.

ಮಂಗಳವಾರ ಅಸ್ಸಾಂನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಇದರಲ್ಲಿ ಭಾರತ್ ಜೋಡೋ ಯಾತ್ರೆ, ಅಸ್ಸಾಂನಲ್ಲಿ ತಮಗಾಗುತ್ತಿರುವ ತೊಡಕು, I.N.D.I.A ಬ್ಲಾಕ್ನಲ್ಲಿ ಯಾರು ಪ್ರಧಾನಿಯಾಗಲಿದ್ದಾರೆ ಎಂಬ ವಿಚಾರಗಳ ಕುರಿತು ಮಾತನಾಡಿದರು.
ರಾಮನ ಅಲೆ ಏನಿಲ್ಲ!

ಈ ವೇಳೆ ಪತ್ರಕರ್ತರೊಬ್ಬರು, ರಾಮ ಮಂದಿರ ಉದ್ಘಾಟನೆ ಬಳಿಕ ದೇಶದಲ್ಲಿ ರಾಮನ ಅಲೆ ಎದ್ದಿದೆ. ವಿಪಕ್ಷಗಳು ರಾಮನ ಅಲೆಯನ್ನು ಎದುರಿಸಲು ಯಾವ ರೀತಿಯ ಯೋಜನೆ ರೂಪಿಸಿಕೊಂಡಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ನಾಯಕ, ಎಲ್ಲೂ ರಾಮನ ಅಲೆ ಎಂಬುದಿಲ್ಲ, ಅಯೋಧ್ಯೆಯಲ್ಲಿ ನಡೆದದ್ದು ಬಿಜೆಪಿಯವರ ಕಾರ್ಯಕ್ರಮ ಎಂದು ನಾನು ಮೊದಲೇ ಹೇಳಿದ್ದೇನೆ. ಅದೊಂದು ರಾಜಕೀಯ ಘಟನೆ, ಬಿಜೆಪಿ ಮತ್ತು ಮೋದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಎಂದು ತಿಳಿಸಿದರು.
ಜನತೆ ಮುಂದೆ ನಮ್ಮ ಯೋಜನೆ
ಈ ಕಾರ್ಯಕ್ರಮ ಚೆನ್ನಾಗಿ ನಡೆದಿದೆ, ಒಳ್ಳೆಯದು, ಆದರೆ ದೇಶವನ್ನು ಬಲಪಡಿಸಲು ನಾವು ನಮ್ಮ ಯೋಜನೆ ಏನೆಂಬುದನ್ನ ಜನತೆಯ ಮುಂದೆ ತಿಳಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಯುವಕರು, ರೈತರು ಮತ್ತು ಮಹಿಳೆಯರಿಗೆ ನ್ಯಾಯಕ್ಕಾಗಿ ನಮ್ಮ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಭಾರತ್ ಜೋಡೋ ನ್ಯಾಯ ಯಾತ್ರೆ ಕಲ್ಪನೆ

ಇದೇ ಸಂದರ್ಭದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಉಲ್ಲೇಖಿಸಿದ ರಾಹುಲ್, ಈ ಯಾತ್ರೆಯ ಹಿಂದೆ ನ್ಯಾಯದ ಕಲ್ಪನೆ ಇದೆ. ಇದು ನ್ಯಾಯದ ಐದು ಸ್ತಂಭಗಳನ್ನು ಒಳಗೊಂಡಿದೆ. ಯುವ ನ್ಯಾಯ, ಪಾಲುದಾರಿಕೆ, ಮಹಿಳಾ ನ್ಯಾಯ, ರೈತ ನ್ಯಾಯ ಮತ್ತು ಕಾರ್ಮಿಕರ ನ್ಯಾಯ. ಈ ಐದು ಸ್ತಂಭಗಳು ದೇಶಕ್ಕೆ ಬಲ ನೀಡಲಿವೆ. ಮುಂದಿನ ಒಂದೂವರೆ ತಿಂಗಳಲ್ಲಿ ಕಾಂಗ್ರೆಸ್ ಇವುಗಳನ್ನು ಸಾರ್ವಜನಿಕರ ಮುಂದೆ ಮಂಡಿಸಲಿದೆ ಎಂದರು.
ಚುನಾವಣೆ ನಂತರ ಪ್ರಧಾನಿ ಹುದ್ದೆ ನಿರ್ಧಾರ
ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ, ಭಾರತ ಚುನಾವಣೆಯ ನಂತರ ವಿರೋಧ ಪಕ್ಷದ ಮೈತ್ರಿ ಈ ವಿಷಯವನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಒಂದು ಕಡೆ ಕೇಂದ್ರ ಸರ್ಕಾರ ಮತ್ತು ಆರ್ಎಸ್ಎಸ್ ಮತ್ತೊಂದು ಕಡೆ I.N.D.I.A ನಡುವೆ ಹೋರಾಟ ನಡೆಯಲಿದೆ. ದೇಶದಲ್ಲಿ ಶೇ.60ರಷ್ಟು ಮತಗಳನ್ನು ಭಾರತ ಹೊಂದಿದೆ ಎಂದು ತಿಳಿಸಿದರು…




