ಅಯೋಧ್ಯೆ : ಉತ್ತರಪ್ರದೇಶದಲ್ಲಿನ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಸೋಮವಾರ ಶ್ರೀರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ವೈಭವದಿಂದ ಕೂಡಿದ ಈ ಸಮಾರಂಭಕ್ಕೆ ದೇಶದ ನಾನಾಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಂಗಳವಾರದಿಂದ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದ್ದು, ಮೊದಲ ದಿನವೇ ಶ್ರೀರಾಮನ ದರ್ಶಕ್ಕೆ ಲಕ್ಷಾಂತರ ಭಕ್ತಾಧಿಗಳು ಆಗಮಿಸಿದ್ದು, ಭೇಟಿಯ ವೇಳೆ ನೂಕುನುಗ್ಗಲು ಉಂಟಾಗಿತ್ತು.

ಜನಸಂದಣಿಯನ್ನು ನಿಯಂತ್ರಿಸಲಾಗದೇ ಉತ್ತರಪ್ರದೇಶ ಪೊಲೀಸರು ಹೈರಾಣಾಗಿದ್ದರು. ಸದ್ಯಕ್ಕೆ ಅಯೋಧ್ಯೆಯತ್ತ ಬರದಂತೆ ಭಕ್ತರಲ್ಲಿ ಅವರು ಮನವಿ ಮಾಡಿದ್ದಾರೆ. ಮೊದಲ ದಿನ ಸುಮಾರು 5 ಲಕ್ಷ ಭಕ್ತಾಧಿಗಳು ಶ್ರೀರಾಮನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ದಿನವೇ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ, ಹಾಗೆಯೇ ಮಂದಿರದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರತಿ ಸಾಲಿಗೆ ಅಡ್ಡಿಪಡಿಸಬೇಡಿ. ಸಾಧ್ಯವಾದಷ್ಟು ಭೇಟಿಯ ದಿನ ಮುಂದೂಡಿ ಎಂದು ಪೊಲೀಸರು ಭಕ್ತಾಧಿಗಳಲ್ಲಿ ಮನವಿ ಮಾಡಿದ್ದಾರೆ.

ಭಕ್ತರನ್ನು ನಿಯಂತ್ರಿಸಲು ರಾಮಮಂದಿರಕ್ಕೆ ಒಬ್ಬ ಐಎಎಸ್ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿದೆ. ಹಾಗೆಯೇ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿ ಬದಲಾವಣೆ ತಂದಿದ್ದಾರೆ.
ಲಖನೌದಿಂದ ಸುಮಾರು 30 ಕಿ.ಮಿ. ದೂರದಲ್ಲಿರುವ ಬಾರಾಬಂಕಿಯಿಂದ ಅಯೋಧ್ಯೆ ಕಡೆಗಿನ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.




