ಅಯೋಧ್ಯೆ : ಅಯೋಧ್ಯೆಯಲ್ಲಿನ ಶ್ರೀರಾಮಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ. ಉದ್ಘಾಟನೆಗೊಂಡ ಮಾರನೇ ದಿನ ಮಂಗಳವಾರ ಸುಮಾರು 5 ಲಕ್ಷ ಭಕ್ತಾಧಿಗಳು ಶ್ರೀರಾಮನ ದರ್ಶನ ಪಡೆದರೆ, ಬುಧವಾರ ಸುಮಾರು 2.50 ಲಕ್ಷ ಭಕ್ತಾಧಿಗಳು ಬಾಲರಾಮನ ದರ್ಶನ ಪಡೆದಿದ್ದಾರೆ.
ಮಂಗಳವಾರ ಒಂದೇ ದಿನದಲ್ಲಿ ಭಕ್ತಾಧಿಗಳಿಂದ 3.17 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಅಯೋಧ್ಯೆಯತ್ತ ಹರಿದು ಬರುತ್ತಿರುವ ಭಕ್ತಾಧಿಗಳ ನಿಯಂತ್ರಣ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದಲ್ಲಿ ತೆರೆಯಲಾದ ಹತ್ತು ಕೌಂಟರ್ ಗಳಲ್ಲಿ ಮತ್ತು ಆನ್ ಲೈನ್ ಮೂಲಕ ಭಕ್ತರು ದೇಣಿಗೆ ನೀಡುತ್ತಿದ್ದು, ಪ್ರಾಣ ಪ್ರತಿಷ್ಠಾಪನೆಯಾದ ಮರುದಿನ ಒಂದೇ ದಿನದಲ್ಲಿ 3.17 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಮಜನ್ಮ ಭೂಮಿ ತೀರ್ಥ ಕ್ಷೇಚ್ರ ಟ್ರಸ್ಟ್ ನ ಟ್ರಸ್ಟಿ ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಶ್ರೀರಾಮನ ದರ್ಶನದ ಅವಧಿ ವಿಸ್ತರಣೆ
ತಂಡೋಪತಂಡವಾಗಿ ಭಕ್ತಾಧಿಗಳು ಶ್ರೀರಾಮನ ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಭಕ್ತರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದೇವಾಲಯಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಮೊದಲು ಬೆಳಗ್ಗೆ 7 ರಿಂದ 11.30 ಮತ್ತ್ು ಮಧ್ಯಾಹ್ನ 2 ರಿಂದ 7 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು. ಇದನ್ನು ಇದೀ ಬೆಳಿಗ್ಗೆಯಿಂದ ರಾತ್ರಿಯವರೆಗೆ ವಿಸ್ತರಿಸಲಾಗಿದೆ.
ಭಕ್ತಾಧಿಗಳ ಭದ್ರತೆಗೆ ಆದ್ಯತೆ ನೀಡಲಾಗಿದ್ದು, ದೇವಾಲಯದ ಆವರಣದ ಹೊರಗೆ ರ್ಯಾಪಿಡ್ ಆಕ್ಷನ್ ಫೋರ್ಸ್ ಮತ್ತು ಕೇಂದ್ರಿಯ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.




