POLICE SUB INSPECTOR INJURED: ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಅಸಭ್ಯ ವರ್ತನೆ: ಪ್ರಶ್ನಿಸಲು ತೆರಳಿದ ಪೊಲೀಸ್ ಮೇಲೆಯೇ ಕಾರು ಹರಿಸಲು ಯತ್ನಿಸಿದ ಪ್ರೇಮಿಗಳು

ಬೆಂಗಳೂರು : ರಸ್ತೆಯ ಪಕ್ಕದಲ್ಲಿಯೇ ಕಾರು ನಿಲ್ಲಿಸಿ ಯುವಕ ಹಾಗೂ ಯುವತಿ ಕಾರಿನೊಳಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರೇಮಿಗಳನ್ನು ಪ್ರಶ್ನಿಸಿದ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಮೇಲೆ ಕಾರು ಹತ್ತಿಸಲು ಮುಂದಾದ ಘಟನೆ ನಡೆದಿದೆ.
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪಕಾರ್ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಇಪ್ಪತ್ತನೇ ತಾರೀಖು ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರಿನಿಂದ ಕೆಳಗೆ ಬಿದ್ದು ಗಾಯಗೊಂಡಿರುವ ಸಬ್ ಇನ್ಸ್ ಪೆಕ್ಟರ್ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಲ್ಲಿ ಬೆತ್ತಲಾಗಿದ್ದ ಜೋಡಿಯನ್ನು ನೋಡಿ ಪ್ರಶ್ನಿಸಲು ಮುಂದಾದ ರಿಸರ್ವ್ ಸಬ್ ಇನ್ಸ್’ಪೆಕ್ಟರ್ ಅಧಿಕಾರಿ ಮಹೇಶ್, ಅವರಿಗೆ ಬುದ್ದಿವಾದ ಹೇಳಲು ಮುಂದಾಗಿದ್ದರು. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಚೆಕ್ ಮಾಡೋ ವೇಳೆ ಯುವಕ ಕಾರು ಚಲಾಯಿಸಿದ್ದ.
ಈ ಸಂದರ್ಭದಲ್ಲಿ ಕಾರಿನ ಮುಂಭಾಗದಲ್ಲಿಯೇ ನಿಂತಿದ್ದ ಮಹೇಶ್ ಅವರ ಮೇಲೆ ಹೋಗುತ್ತಿತ್ತು. ಕೂಡಲೇ ಮಹೇಶ್ ಅವರು ಕಾರಿನ ಬಾನೇಟ್ ಹಿಡಿದುಕೊಂಡಿದ್ದರು. ಇದನ್ನು ಕೇರ್ ಮಾಡದೇ ಕಾರು ಚಲಾಯಿಸಿರುವ ಆಸಾಮಿ, ಬಳಿಕ ಕಾರನ್ನು ರಿವರ್ಸ್ ಹೋಗಿ ಬ್ರೇಕ್ ಹಾಕಿದ್ದಕ್ಕೆ ಮಹೇಶ್ ಅವರು ಕೆಳಗೆ ಬಿದ್ದಿದ್ದರು.
ಹಿಟ್ ಅಂಡ್ ರನ್ ಮಾಡಿ ಜೋಡಿ ಪರಾರಿಯಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೇಮಿಗಳ ಇಬ್ಬರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

More News