ಹ್ಯಾಕರ್ ಶ್ರೀಕಿ ನಮ್ಮನ್ನೂ ಯಾಮಾರಿಸಿದ್ದ : ಶ್ರೀಕಿ ಪ್ರಾಣ ಬೆದರಿಕೆ : ಸಿದ್ದರಾಮಯ್ಯ ಅವರ ಮೇಲೆ ಅನುಮಾನ ?

ಬೆಂಗಳೂರು : ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ನೋಡಿದ್ರೆ, ನಮಗೆ ಅವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೇ ಆತನಿಗೆ ಏನಾದ್ರೂ ಮಾಡಿ, ಸರ್ಕಾರದ ತಲೆ ಮೇಲೆ ಹಾಕ್ತಾರಾ ಅಂತಾ.? ಅನ್ನೋ ಭಯ ಕಾಡುತ್ತಿದೆ ಎಂದು ಆರೋಪಿಸಿದ ಅವರು, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಾವು ಕೊಟ್ಟ ದಾಖಲೆಗಳೇ ಕಾಂಗ್ರೆಸ್ ಬಳಿ ಇರೋದು
ಕಾಂಗ್ರೆಸ್ ಮುಖಂಡರು ಯಾರ ಮೇಲೆ ಬೇಕಾದ್ರೂ ಆರೋಪ ಮಾಡುತ್ತಾರೆ, ಅವರು ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯ ಏನಿದೆ ಎನ್ನುವುದು ನೋಡಿದ್ರೆ, ನಾವು ಕೊಟ್ಟ ದಾಖಲೆಗಳು ಮಾತ್ರ ಅವರಲ್ಲಿವೆ ಎಂದು ಆರೋಪಿಸಿದ ಅವರು, ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿಗೆ ಜನ ಮೆಚ್ಚಿದ್ದಾರೆ, ವಿಪಕ್ಷಕ್ಕೆ ಮಾತನಾಡಲು ವಿಷಯಗಳಿಲ್ಲ, ಹಾಗಾಗಿ ಇಲ್ಲದಿರೋ‌ ವಿಚಾರವನ್ನ ದೊಡ್ಡದು ಮಾಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಈಗಾಗಲೇ ಪ್ರಕರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟವಾಗಿ ಹೇಳಿದ್ದು, ಕಾಂಗ್ರೆಸ್ ನವರು ಒಂದು ಸುಳ್ಳನ್ನ ನೂರು ಬಾರಿ ಹೇಳ್ತುತ್ತಿದ್ದಾರೆ, ಇದನ್ನ ಎಳೆದುಕೊಂಡು ಹೋದ್ರೆ, ರಾಜಕೀಯ ಲಾಭ ಪಡೆಯಬಹುದು ಅಂದುಕೊಂಡಿದ್ದಾರೆ ಅದು ಸಾಧ್ಯವಿಲ್ಲ ಎದರು.
2018ರಲ್ಲಿ ಶಾಸಕರ ಪುತ್ರನ ಜೊತೆ ಸಿಲುಕಿಕೊಂಡಾಗ ವಿಚಾರಣೆ ಯಾಕೆ ಮಾಡಲಿಲ್ಲ, ಯಾವ ಕಾರಣಕ್ಕಾಗಿ ಅವರ ಮುಖಂಡನ ಮಗನ ಜೊತೆ ತುಂಬಾ ದಿನ ಹೋಟೆಲ್‌ನಲ್ಲಿದ್ದ, ಮತ್ತೊಮ್ಮೆ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ಆಗಲೂ ಕೂಡ ಎಕೆ ವಿಚಾರಣೆ ಮಾಡಲಿಲ್ಲ ಎಂದು ಗೃಹ ಸಚಿವರು ಪ್ರಶ್ನಿಸಿದರು.
ಶ್ರೀಕಿ ನಮ್ಮನ್ನೂ ಯಾಮಾರಿಸಿದ್ದ
ನಾವು ಶ್ರೀಕಿಯನ್ನ ಹಿಡಿದು ಡ್ರಗ್ಸ್ ಮತ್ತು ಬಿಟ್ ಕಾಯಿನ್ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದೇವೆ, ಅವನು ನಮ್ಮನ್ನೂ ಯಾಮಾರಿಸಿದ್ದ ಎಂದು ತಪ್ಪು ಒಪ್ಪಿಕೊಂಡ ಗೃಹ ಸಚಿವರು, ನಕಲಿ ಅಕೌಂಟ್ ತೋರಿಸಿ ಯಾಮಾರಿಸಿ, ಎಕ್ಸ್‌ಚೇಂಜ್ ಅಂತ ತೋರಿಸಿದ್ದ, ಆ ಅಕೌಂಟ್ ಫೇಕ್ ಆಗಿತ್ತು ಎಂದು ಘಟನೆಯನ್ನು ವಿವರಿಸಿದರು.

ಈ ವಿಚಾರ ಅಧಿವೇಶನದಲ್ಲಿ ಚರ್ಚೆಯಾದ್ರೂ ನಾವು ಉತ್ತರ ಕೊಡ್ತೀವಿ ಎಂದು ತಿಳಿಸಿದ ಆರಗ ಜ್ಞಾನೇಂದ್ರ, ಬಾಯಿ ಬಿಡಿಸಿ, ಪಾರದರ್ಶಕವಾಗಿ ತನಿಖೆ ಮಾಡಿರೋದು ನಾವು ಎಂದರು. ಇಂಟರ್ ಪೋಲ್, ಕೇಂದ್ರ ಸರ್ಕಾರ ಎಲ್ಲರಿಗೂ ತಿಳಿಸಿ ವರದಿ ನೀಡಿರೋದು ನಾವು, ಆದ್ರೆ ಈಗ ನೋಡಿದ್ರೆ ನಾವೇ ಏನೋ ಮಾಡಿದ್ದೇವೆ ಅನ್ನುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮತಾಂತರ ಕಾಯ್ದೆ ಮಂಡನೆ ವಿಚಾರ
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಕಾಯ್ದೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ, ಧಾರ್ಮಿಕ ಮುಖಂಡರ ಜೊತೆಗೂ ಚರ್ಚೆ ಮಾಡಿ ಒಂದು ಒಳ್ಳೆಯ ಕಾಯ್ದೆಯನ್ನು ತರುವ ಉದ್ದೇಶ ಹೊಂದಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.
ಇದರಲ್ಲಿ ಯಾವುದೇ ರೀತಿಯ ಪೂರ್ವಾಗ್ರಹ ಇಲ್ಲ. ಅವರ ಧರ್ಮದಲ್ಲಿ ಅವರವರು ಶಾಂತಿಯುತವಾಗಿ ಬದುಕಬೇಕು. ಎಲ್ಲರಿಗೂ ಸರ್ಕಾರದ ರಕ್ಷಣೆ ಇದೆ. ಆದರೆ ಇನ್ನೊಂದು ಧರ್ಮದವರನ್ನು ಪರಿವರ್ತನೆ ಮಾಡಿ ತಮ್ಮ ಸಂಖ್ಯೆ ಹೆಚ್ಚಳ ಮಾಡುವುದು ಹಾಗೂ ಈ ದೇಶದ ವಿರುದ್ಧ ಎತ್ತಿ ಕಟ್ಟುವುದು ಹಾಗೂ ಈ ನೆಲದ ಕಾನೂನು ಅನ್ವಯವಾಗಲ್ಲ ಎನ್ನುತ್ತಾರಲ್ಲಾ ಈ ವ್ಯವಸ್ಥೆ ವಿರುದ್ಧ ಸರ್ಕಾರ ಕಾಯ್ದೆ ತರುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕಾಯ್ದೆ ತರುವಾಗ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಇದೇ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ. ಇಲ್ಲವಾದರೆ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಎಂದು ಗೃಹಸಚಿವರು ತಿಳಿಸಿದರು.

More News