ಬೆಂಗಳೂರು : ಖ್ಯಾತ ನಟ ದಿವಂಗತ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದರು.
ಅರಮನೆ ಮೈದಾನದಲ್ಲಿ ನಡೆದ ಪುನೀತ್ ಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು,ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಸ್ಮಾರಕದಂತೆ ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಸರ್ಕಾರ ನಿರ್ಮಾಣ ಮಾಡಲಾಗುವುದು.ಪುನೀತ್ ಅವರ ಸ್ಮರಣೆ ಅಜರಾಮರ ವಾಗಿರಲಿದೆ ಎಂದು ತಿಳಿಸಿದರು.ಈ ವೇಳೆ ಸಭೆಯಲ್ಲಿದ್ದ ಪುನೀತ್ ಅಭಿಮಾನಿಗಳು ಹಾಗೂ ವಾಣಿಜ್ಯ ಮಂಡಳಿ ಸದಸ್ಯರಿಂದ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಗೆ ಒಕ್ಕೊಲರಿನಿಂದ ಮನವಿ ಮಾಡಿದರು.ಈ ವೇಳೆ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದರು.
ಅಂತೆಯೇ ಕೇಂದ್ರ ಸರ್ಕಾರದಿಂದ ನೀಡಲಾಗುವ ಪ್ರಮುಖ ಪ್ರಶಸ್ತಿಗೂ ಪುನೀತ್ ಹೆಸರನ್ನು ಶಿಫಾರಸ್ಸು ಮಾಡುವುದಾಗಿ ಮುಖ್ಯಮಂತ್ರಿ ಇದೇ ವೇಳೆ ತಿಳಿಸಿದರು.
ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಡಾ.ರಾಜ್ ಕುಮಾರ್ ಕುಟುಂಬ ನಡೆದುಕೊಂಡ ರೀತಿ.ಪುನೀತ್ ಅಂತ್ಯ ಸಂಸ್ಕಾರದವರೆಗೆ ಅಭಿಮಾನಿಗಳು,ಚಿತ್ರೋದ್ಯಮ ತೋರಿದ ಬೆಂಬಲಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದಗಳನ್ನು ತಿಳಿಸಿದರು.




