ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅದೃಷ್ಟದ ಮನೆ ಎಂದೇ ಬಿಂಬಿತವಾಗಿರುವ ಕುಮಾರಪಾರ್ಕ್ ನಲ್ಲಿ ಸರ್ಕಾರಿ ನಿವಾಸಕ್ಕೆ ಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭೇಟಿ ನೀಡಿದರು.
ಈ ಮನೆಯಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಾಸ್ತವ್ಯ ಹೂಡಿದ್ದರು. ಇದೀಗ ಕುಮಾರ ಪಾರ್ಕ್ ನಲ್ಲಿರುವ ಈ ಮನೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸರ್ಕಾರಿ ನಿವಾಸ ನೀಡಲಾಗಿದೆ.
ಮುಂದಿನ ತಿಂಗಳ 22 ರಂದು ನೂತನ ನಿವಾಸದಲ್ಲಿ ಪೂಜೆ ಸಲ್ಲಿಸಿ, ಅಧಿಕೃತವಾಗಿ ಈ ನಿವಾಸದಿಂದ ಡಿ.ಕೆ.ಶಿವಕುಮಾರ್ ಅವರು ಕಾರ್ಯಾರಂಭ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಅಲ್ಲಿ ನಡೆಯುತ್ತಿರುವ ಬಾಕಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿ ಅಧ್ಯಕ್ಷರ ನೇಮಕದ ಪಟ್ಟಿ ಬಿಡುಗಡೆ ಬಳಿಕ ಯಾವುದೇ ಗೊಂದಲಗಳಿಲ್ಲ, ಎಲ್ಲವನ್ನು ಗಮನಿಸಿ, ಚರ್ಚೆ ನಡೆಸಿಯೇ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದರು.
ಕೆಲವೇ ದಿನಗಳಲ್ಲಿ ಮತ್ತೆ ಕಾರ್ಯಕರ್ತರು, ಜಿಲ್ಲಾಧ್ಯಕ್ಷರು ಒಳಗೊಂಡ 39 ಜನರ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ ಅವರು ಇದು ಕೇವಲ ಎರಡು ವರ್ಷಕ್ಕೆ ಮಾಡಿರುವ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ನೂರಾರು ಸಮಿತಿಗಳಿವೆ. ರಾಜ್ಯ ಸಮಿತಿ ಇದೆ. ಈ ಎಲ್ಲದಕ್ಕೂ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಕಾರ್ಯಕರ್ತರಿಗೂ ಸೂಕ್ತ ಮತ್ತು ಅಗತ್ಯ ಹುದ್ದೆಗಳನ್ನು ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಶಾಮನೂರು ಹೇಳಿಕೆಗೆ ಡಿಸಿಎಂ ತಿರುಗೇಟು
ಸಂಸದ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಿ ಎಂದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಶೆಟ್ಟರ್ ವಿರುದ್ಧ ವ್ಯಂಗ್ಯ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಬೇಕು ಎಂಬ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮ ಮಾಡಲು ಹೇಳಿದ್ರು, ಇದೆ ಶೆಟ್ಟರ್ ಬಿಜೆಪಿ ಸೋಲಿಸಲು ಪಣತೊಟ್ಟಿದ್ದರು ಎಂದು ತಿರುಗೇಟು ನೀಡಿದರು.




