ಬೆಂಗಳೂರು : ಎಲೆಕ್ಷನ್ ಹತ್ತಿರ ಬರುತ್ತಿದ್ದರಿಂದ ಬಿಜೆಪಿಯವರು ರಾಜಕೀಯ ಮಾಡಬೇಕು, ಮಾಡುತ್ತಿದ್ದಾರೆ, ಮಂಡ್ಯದಲ್ಲಿ ಬಿಜೆಪಿಗೆ ನೆಲೆನೇ ಇಲ್ಲ, ನೆಲೆ ಮಾಡಿಕೊಳ್ಳಬೇಕು ಅದಕ್ಕೆ ನೆಲೆಯನ್ನ ಕ್ರೀಯೇಟ್ ಮಾಡೋದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ವಿಚಾರವನ್ನು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಲ್ಲಾ ಕಡೆನೂ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ಪ್ಲಾಗ್ ಹಾಕೊಂಡು ತಿರುಗಾಡಿದರೆ, ಈ ದೇಶದ ಸಂವಿಧಾನ ಯಾಕೆ ಇರಬೇಕು..? ಎಂದು ಪ್ರಶ್ನಿಸಿದರು.

ಪಂಚಾಯತಿಗೆ ಪರ್ಮಿಷನ್ ಕೇಳಿದ್ದಾರೆ, ಆ ಪ್ರಕಾರ ಮಾಡಬೇಕಿತ್ತು, ಸುಮ್ಮನೆ ಎತ್ತಿಕಟ್ಟಿ ಗಲಾಟೆ ಮಾಡಬೇಕು, ಅಶಾಂತಿ ಉಂಟು ಮಾಡಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ, ದೇಶ ಕಾನೂನು ಏನಿದೆ ಆ ಪ್ರಕಾರ ನಾವೆಲ್ಲ ನಡೆದುಕೊಳ್ಳಬೇಕು ಎಂದು ಕರೆನೀಡಿದರು.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾರ್ರಿ ಹಿಂದೂ, ಫಸ್ಟ್ ನಾವೆಲ್ಲ ಭಾರತೀಯರು, ಭಾರತದ ಸಂವಿಧಾನ, ನಾವೆಲ್ಲ ಹಿಂದೂ ಅಲ್ವಾ.. ಇವರು ಇಬ್ಬರೇನಾ ಹಿಂದೂ ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿರೋರೆಲ್ಲ ಹಿಂದೂ ಅಲ್ವಾ.? ಸುಮ್ಮೆನೆ ಅಶಾಂತಿ ಮೂಡಿಸಲು ಪ್ರಯತ್ನ ಮಾಡ್ತಿದ್ದಾರೆ, ಮಾಡ್ಲಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.