ಬೆಂಗಳೂರು : ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾಕ್ತೀವಿ ಅಂತ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ, ಯಾವುದೇ ರಾಜಕೀಯ, ಧರ್ಮದ ಧ್ವಜ ಹಾರಿಸಲ್ಲ ಅಂತ ಬರೆದುಕೊಟ್ಟಿದ್ದಾರೆ. ಆದರೆ ಹನುಮ ಧ್ವಜ ಹಾರಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ನಮ್ಮ ದೇವರು ಅಂತಾರೆ. ಅವರಿಗೆ ಹೇಗೆ ದೇವರೋ, ನಮಗೂ ಹಾಗೇ ದೇವರು. ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಬಾರದು ಅಂತಿದೆ, ಅಂತಾ ನಿಮಯವನ್ನು ಗಾಳಿಗೆ ತೂರಿ ಅವರು ಬೇರೆ ಧ್ವಜವನ್ನು ಹಾರಿಸಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಸೇನೆ, ಬೇರೆಯವರೂ ಹೋಗಿ ನಮ್ಮ ಧ್ವಜ ಹಾಕ್ತೀವಿ ಅಂದಿದ್ದಾರೆ. ನಮ್ಮ ಮನೆ ಮೇಲೆ ಹಾಕ್ತೀವಿ ಯಾರು ತಡೀತಾರೆ.! ಆದ್ರೆ,ಸರ್ಕಾರಿ ಜಾಗದಲ್ಲಿ ಹಾರಿಸ್ತೇವೆ ಅಂತ ಮುಂದಾಗಿದ್ದಾರೆ. ನಾವೆಲ್ಲಾ ಸರ್ಕಾರಿ ಆಸ್ತಿ ರಕ್ಷಣೆ ಮಾಡ್ತೀವಿ ಅಂತ ಸಿಎಂ ಹಾಗೂ ನಾವೆಲ್ಲಾ ಪ್ರಮಾಣ ಮಾಡಿದ್ದೇವೆ ಆದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅವರು ಅನುಮತಿ ಪಡೆದಿರೋದು ಧ್ವಜ ಹಾರಿಸಲು. ಯಾವ ಧ್ವಜ.? ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾರಿಸ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಅದಕ್ಕಾಗಿ ಪಂಚಾಯತಿ ಪರ್ಮೀಷನ್ ಕೂಡ ಪಡೆದಿದ್ದಾರೆ. ಪರ್ಮೀಷನ್ ಕೊಡುವಾಗ ಕಂಡೀಷನ್ ಹಾಕಿದ್ದಾರೆ, ಆದರೆ ಬಿಜೆಪಿಯವರು ಸುಖಾಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರಿಗೆ ನಿಗಮ ಮಂಡಳಿ
ಕಾರ್ಯಕರ್ತರಿಗೆ ನಿಗಮ ಮಂಡಳಿ ನೀಡುವ ವಿಚಾರ ನನಗೆ ಆ ಬಗ್ಗೆ ಮಾಹಿತಿ ಇಲ್ಲ. ನನ್ನ ಗಮನಕ್ಕೆ ಆ ವಿಚಾರ ಬಂದಿಲ್ಲ. ಸಿಎಂ ಹೈಕಮಾಂಡ್‌ಗೆ ಮಾಹಿತಿ ನೀಡಿರಬೇಕು. ಹೈಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಲಿದೆ ಎಂದರು.